

ಅಮೆರಿಕಾ: ಭಾನುವಾರ (ಜೂ.09) ನ್ಯೂಯಾರ್ಕ್ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ 6 ರನ್ಗಳಿಂದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಭಾರತ ಎದುರು ತಮ್ಮ ತಂಡ ಹೀನಾಯವಾಗಿ ಸೋತ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಪಾಕ್ ಆಟಗಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಆದ್ರೆ, ಈ ಮಧ್ಯೆ ಕಮ್ರಾನ್ ಅಕ್ಮಲ್ ನೀಡಿದ ವಿವಾದಾತ್ಮಕ ಹೇಳಿಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಯಿತು.
ಟಿವಿ ವಾಹಿನಿಯೊಂದರ ಪಂದ್ಯ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಮಲ್, ಈಗ ಏನಾದರೂ ಆಗಬಹುದು. ಕೊನೆಯ ಓವರ್ ಅನ್ನು ಅರ್ಷದೀಪ್ ಸಿಂಗ್ ಬೌಲ್ ಮಾಡುತ್ತಾರೆ. ಅವನು ಉತ್ತಮ ಲಯದಲ್ಲಿ ಕಾಣಿಸುತ್ತಿಲ್ಲ. 12 ಗಂಟೆಗೆ ಸಿಖ್ಖರನ್ನು (ಅರ್ಷದೀಪ್ ಸಿಂಗ್) ಬೌಲ್ಡ್ ಮಾಡಲಾಗಿದೆ ಎಂದು ವ್ಯಂಗ್ಯವಾಗಿ ನಕ್ಕರು. ಟೀಮ್ ಇಂಡಿಯಾ ಬೌಲರ್ ಅರ್ಷದೀಪ್ ಸಿಂಗ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದ ಅಕ್ಮಲ್, ಅರ್ಷದೀಪ್ ಹೆಸರನ್ನು ಉಲ್ಲೇಖಿಸುವ ಮೂಲಕ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ್ದರು.
ಈ ವಿಷಯಕ್ಕೆ ಕಮ್ರಾನ್ ವಿರುದ್ಧ ತೀವ್ರ ಕೋಪಗೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ನಿಮ್ಮ ತಾಯಿ ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ, ನಾವು (ಸಿಖ್ಖರು) ಅವರನ್ನು ಅವರ ಸೆರೆಯಿಂದ ರಕ್ಷಿಸಿದ್ದೇವೆ, ಆಗ ಸಮಯ ಸರಿಯಾಗಿ 12 ಗಂಟೆಗಳು. ನಾಚಿಕೆಯಾಗಬೇಕು ನಿಮಗೆ. ಸ್ವಲ್ಪ ಕೃತಜ್ಞತೆ ತೋರಿ ಎಂದು ಕಮ್ರಾನ್ ಅಕ್ಮಲ್ ಅವರನ್ನು ಟ್ಯಾಗ್ ಮಾಡಿ ತಿರುಗೇಟು ನೀಡಿದ್ದರು.
ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹರ್ಭಜನ್ ಸಿಂಗ್ ಬಳಿ ಅಕ್ಮಲ್ ಟ್ವೀಟ್ ಮೂಲಕವೇ ಕ್ಷಮೆಯಾಚಿಸಿದ್ದರು. ಆದ್ರೆ, ಇಷ್ಟಕ್ಕೆ ಸುಮ್ಮನಾಗದ ಬಜ್ಜಿ, ಮತ್ತೊಂದು ಹೇಳಿಕೆಯನ್ನು ಹೊರಹಾಕುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಕಮ್ರಾನ್ಗೆ ಮುಟ್ಟಿಸಿದ್ದಾರೆ. "ಇಂತಹ ಹೇಳಿಕೆಯನ್ನು ಕೊಡಲು ಕಮ್ರಾನ್ ಅಕ್ಮಲ್ನಂತಹ ನಾಲಾಯಕ್ಗಳಿಗೆ ಮಾತ್ರ ಸಾಧ್ಯ" ಎಂದು ಹೇಳಿದ್ದಾರೆ,(ಏಜೆನ್ಸೀಸ್).