

ನವದೆಹಲಿ: ದಾಖಲೆಗಳ ಸರದಾರ, ರನ್ ಮೆಷಿನ್ ಹಾಗೂ ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂಡದ ಆಧಾರಸ್ತಂಭ ಎನ್ನುವುದರಲ್ಲಿ ಸಂಶಯವೇ ಇಲ್ಲ. ಕೊಹ್ಲಿ, ವಿಶ್ವದ ಅಗ್ರ ಬ್ಯಾಟರ್. ಲೆಜೆಂಡರಿ ಕ್ರಿಕೆಟಿಗರಿಂದ ಮೆಚ್ಚುಗೆ ಪಡೆದ ಪ್ರತಿಭೆ. ಆದರೆ, ಕೊಹ್ಲಿ ಈ ಮಟ್ಟಕ್ಕೆ ತಲುಪಲು ಸಾಕಷ್ಟು ಶ್ರಮಿಸಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಕೊಹ್ಲಿಗೆ ಕ್ರೀಡೆಯಲ್ಲಿ ಯಾವುದೇ ಬೆಂಬಲ ಇರಲಿಲ್ಲ. ಆದರೆ, ತಮ್ಮ ಪ್ರತಿಭೆಯನ್ನು ನಂಬಿ, ಶ್ರಮವಹಿಸಿ ಈ ಮಟ್ಟಕ್ಕೆ ತಲುಪಿದ್ದಾರೆ. ನಿರಂತರವಾಗಿ ತಮ್ಮ ಬ್ಯಾಟಿಂಗ್ ಮತ್ತು ಫಿಟ್ನೆಸ್ ಅನ್ನು ಸುಧಾರಿಸುವ ಮೂಲಕ ಯಾರೂ ತಲುಪಲು ಸಾಧ್ಯವಾಗದ ಮಟ್ಟಕ್ಕೆ ಕೊಹ್ಲಿ ತಲುಪಿದ್ದಾರೆ. ಆದರೆ ಇತರೆ ಕ್ರಿಕೆಟಿಗರಂತೆ ಕೊಹ್ಲಿ ಕೂಡ ಒಂದು ಹಂತದಲ್ಲಿ ತಮ್ಮನ್ನು ತಾವೇ ಕಡಿಮೆ ಅಂದಾಜು ಮಾಡಿಕೊಂಡಿದ್ದರು. ತನ್ನಿಂದ ಏನೂ ಆಗದು ಅಂದುಕೊಂಡಿದ್ದರು. ಆ ಸಮಯದಲ್ಲಿ ನಾನು ಕೊಹ್ಲಿಯನ್ನು ಪ್ರೇರೇಪಿಸಿದ್ದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಟೆಸ್ಟ್‌ನಲ್ಲಿ ಕಷ್ಟಪಡುತ್ತಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸದಲ್ಲಿ ಫಿಡೆಲ್ ಎಡ್ವರ್ಡ್ಸ್ ಅವರನ್ನು ಎದುರಿಸಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. ಎಡ್ವರ್ಡ್ಸ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಅಥವಾ ಶಾರ್ಟ್ ಬಾಲ್ಗೆ ಕ್ಯಾಚ್ ನೀಡಿ ವಿರಾಟ್ ಔಟ್ ಆಗುತ್ತಲೇ ಇದ್ದರು. ಇದರಿಂದ ಕೊಹ್ಲಿ ಹತಾಶೆಗೆ ಒಳಗಾಗಿದ್ದರು. ಟೆಸ್ಟ್ ಪಂದ್ಯಕ್ಕೆ ತಾನು ನಿಷ್ಪ್ರಯೋಜಕನೆಂದು ಭಾವಿಸಿದ್ದರು. ತನ್ನನ್ನೇ ತಾನು ಕೆಟ್ಟದಾಗಿ ಶಪಿಸಿಕೊಂಡಿದ್ದರು. ನನ್ನ ಬಳಿ ಬಂದು ನನ್ನಿಂದ ಸರಿಯಾಗಿ ಆಡಲು ಆಗುತ್ತಿಲ್ಲವೇ? ಎಂದು ಅನುಮಾನ ವ್ಯಕ್ತಪಡಿಸಿದ್ದರು ಎಂದು ಹರ್ಭಜನ್ ಸಿಂಗ್ ಹೇಳಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸದಿದ್ದರೆ ನಿನಗೆ ನಾಚಿಕೆಯಾಗಬೇಕು. ನೀವು ಶಕ್ತಿಯನ್ನು ಹೊಂದಿದ್ದೀರಿ ಎಂದು ನಾನು ಕೊಹ್ಲಿಗೆ ಸ್ಫೂರ್ತಿ ನೀಡಿದೆ. ನೀವು ಆ ಮಟ್ಟವನ್ನು ತಲುಪದಿದ್ದರೆ, ಅದು ಖಂಡಿತವಾಗಿಯೂ ನಿಮ್ಮ ತಪ್ಪು ಎಂದು ಹೇಳಿದೆ. ಇದಾದ ನಂತರ ಕೊಹ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಬದಲಾಯಿಸಿಕೊಂಡು ಈ ಮಟ್ಟಕ್ಕೆ ತಲುಪಿದ್ದಾರೆ. ಯಾರಿಂದಲೂ ಸಾಧ್ಯವಾಗದ ಹಲವು ಅಪರೂಪದ ಸಾಧನೆಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸುತ್ತಾ, ನಾನು ಆಡಿದ ಮಾತುಗಳು ಅಂದು ವಿರಾಟ್ ಮೇಲೆ ಪ್ರಭಾವ ಬೀರಿದೆ ಎಂದು ಹರ್ಭಜನ್ ಸಿಂಗ್ ಹೇಳಿದರು.
ಕೊಹ್ಲಿ ಈಗ ಅಂದಿನಂತಲ್ಲ, ಸಂಪೂರ್ಣ ಬದಲಾಗಿದ್ದಾರೆ. ಡಯಟ್ನಿಂದ ಹಿಡಿದು ಎಲ್ಲವನ್ನೂ ಬದಲಾಯಿಸಿದ್ದಾರೆ. ಸಾಮಾನ್ಯ ಆಟಗಾರನಾಗಿ ಉಳಿಯಬಾರದು ಮತ್ತು ಸದಾ ನೆನಪಿನಲ್ಲಿ ಉಳಿಯಬೇಕೆಂಬ ಹಂಬಲದಿಂದ ಬದಲಾಗಿದ್ದಾರೆ. ಟೀಮ್ ಇಂಡಿಯಾಗೆ ಹಲವು ಗೆಲುವುಗಳನ್ನು ನೀಡಲು ಹಸಿವಿನಿಂದ ಆಡುತ್ತಿದ್ದಾರೆ ಎಂದು ಹರ್ಭಜನ್ ಹೊಗಳಿದರು.
ಗೆದ್ದರೂ ಸೋತರೂ ಹೋರಾಟ ನಿಲ್ಲಿಸಬಾರದು ಎಂಬುದು ಕೊಹ್ಲಿಯ ತತ್ವವಾಗಿದೆ. ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮುಂಬರುವ ಪೀಳಿಗೆಗಳು ಕೊಹ್ಲಿಯಿಂದ ಸ್ಫೂರ್ತಿ ಪಡೆಯಲಿದ್ದಾರೆ. ಪರಿಶ್ರಮ, ಶಿಸ್ತು, ಕಲಿಯುವ ಮನೋಭಾವ ಹಾಗೂ ಎಂದೂ ಬಿಟ್ಟುಕೊಡದ ಮನೋಭಾವವಿದ್ದರೆ ಇತರರು ಕೂಡ ವಿರಾಟ್ ಮಟ್ಟವನ್ನು ತಲುಪಬಹುದು ಎಂದು ಕೊಹ್ಲಿಯನ್ನು ಹರ್ಭಜನ್ ಸಿಂಗ್ ಮನಸಾರೆ ಕೊಂಡಾಡಿದರು. (ಏಜೆನ್ಸೀಸ್)