

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 551 ವಿಕೆಟ್ ಸಂಪಾದಿಸಿರುವ ಭಾರತ ತಂಡದ ಮಾಜಿ ವೇಗದ ಬೌಲರ್ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಅವರಿಗೆ ಸೋಮವಾರ 51ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದಿಂದ ಶುಭಾಶಯಗಳ ಸುರಿಮಳೆಯಾಗಿದೆ.
ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಶ್ರೀನಾಥ್ ಜನ್ಮದಿನಕ್ಕೆ ಶುಭಾಶಯ ಹೇಳುವ ಜತೆಗೆ ಅವರ ಸಾಧನೆಗಳನ್ನೂ ಮೆಲುಕು ಹಾಕಲಾಗಿದೆ. ಭಾರತ ಪರ ಏಕದಿನ ಕ್ರಿಕೆಟ್ನಲ್ಲಿ 300ಕ್ಕೂ ಅಧಿಕ ವಿಕೆಟ್ ಕಬಳಿಸಿರುವ ಏಕೈಕ ವೇಗದ ಬೌಲರ್ ಎಂಬ ಅವರ ಹೆಗ್ಗಳಿಕೆಯನ್ನೂ ಸ್ಮರಿಸಲಾಗಿದೆ.
ಶ್ರೀನಾಥ್ ಅವರ ಮಾಜಿ ಸಹ-ಆಟಗಾರ ಹಾಗೂ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅವರು ಕನ್ನಡದಲ್ಲೇ ಶುಭಾಶಯ ತಿಳಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ನನ್ನ ಸ್ನೇಹಿತರಾದ ಜಾವಗಲ್ ಶ್ರೀನಾಥ್ ಅವರಿಗೆ. ಭಾರತದ ಖ್ಯಾತ ವೇಗದ ಬೌಲರ್ ಸಾಕಷ್ಟು ಕೀರ್ತಿಯನ್ನು ಭಾರತ ಮತ್ತು ಕರ್ನಾಟಕಕ್ಕೆ ಒದಗಿಸಿ ಕೊಟ್ಟಿದ್ದಾರೆ' ಎಂದು ಸುನೀಲ್ ಜೋಶಿ ಬರೆದಿದ್ದಾರೆ.
ಶ್ರೀನಾಥ್ ಸಮಕಾಲೀನ ಕರ್ನಾಟಕದ ಮತ್ತೋರ್ವ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಅವರೂ ಟ್ವಿಟರ್ನಲ್ಲಿ ಶುಭಾಶಯ ತಿಳಿಸಿದ್ದು, ಶ್ರೀನಾಥ್ ನಿಜಕ್ಕೂ ದಿಗ್ಗಜ ಮತ್ತು ನನ್ನ ಅಣ್ಣ ಇದ್ದಂತೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಜಾವಗಲ್ ಶ್ರೀನಾಥ್ಗೆ ಇಂದು 51ನೇ ಜನ್ಮದಿನದ ಸಂಭ್ರಮ
ಹಾಲಿ ಐಸಿಸಿ ಮ್ಯಾಚ್ ರೆಫ್ರಿಯೂ ಆಗಿರುವ ಶ್ರೀನಾಥ್ ಅವರಿಗೆ ಐಸಿಸಿ ಟ್ವಿಟರ್ ಖಾತೆಯಲ್ಲೂ ಶುಭಾಶಯ ತಿಳಿಸಲಾಗಿದ್ದು, ಅವರ ಸಾಧನೆಗಳನ್ನೂ ಮೆಲುಕು ಹಾಕಲಾಗಿದೆ. ಶ್ರೀನಾಥ್ ಅವರ ಸಾಕಷ್ಟು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆ ಹರಿಸಿದ್ದಾರೆ. ಇದೇ ವೇಳೆ ಅವರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರ ಅದ್ಭುತ ಸ್ವಿಂಗ್ ಎಸೆತವೊಂದರ ವಿಡಿಯೋ ಕೂಡ ವೈರಲ್ ಆಗಿದೆ.