ಜಾವಗಲ್​ ಶ್ರೀನಾಥ್​ಗೆ ಇಂದು 51ನೇ ಜನ್ಮದಿನದ ಸಂಭ್ರಮ

srinath birthday
Published on

ಬೆಂಗಳೂರು: ಭಾರತೀಯ ಕ್ರಿಕೆಟ್​ ಇತಿಹಾಸ ಕಂಡ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆನಿಸಿದ ಕರ್ನಾಟಕದ ಮಾಜಿ ಬೌಲರ್​ ಜಾವಗಲ್​ ಶ್ರೀನಾಥ್​ ಅವರಿಗೆ ಸೋಮವಾರ 51ನೇ ಜನ್ಮದಿನದ ಸಂಭ್ರಮ. ಕಪಿಲ್​ ದೇವ್​ ನಿವೃತ್ತಿಯ ನಂತರದಲ್ಲಿ ಭಾರತೀಯ ವೇಗದ ಬೌಲಿಂಗ್​ ವಿಭಾಗದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶ್ರೀನಾಥ್​ 2003ರ ವಿಶ್ವಕಪ್​ ನಂತರ ವಿದಾಯ ಹೇಳಿದ್ದರು. ಈಗ ಅವರು ಐಸಿಸಿ ಮ್ಯಾಚ್​ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ತಂಡ ಗೆಲುವಿಗಾಗಿ ಸ್ಪಿನ್ನರ್​ಗಳನ್ನೇ ನೆಚ್ಚಿಕೊಂಡಿದ್ದ ಕಾಲದಲ್ಲಿ ಶ್ರೀನಾಥ್​, ವೇಗದ ಬೌಲರ್​ಗಳು ಕೂಡ ಮ್ಯಾಚ್​ ವಿನ್ನರ್​ಗಳಾಗಬಲ್ಲರು ಎಂದು ನಿರೂಪಿಸಿದ್ದರು. ಆದರೆ ಅವರ ಸಿಗಬೇಕಾದ ಅರ್ಹ ಗೌರವದ ಕೊರತೆ ಈಗಲೂ ಕಾಡುತ್ತಿದೆ. ಪದ್ಮಶ್ರೀ ಸಹಿತ ಅರ್ಹ ಪ್ರಶಸ್ತಿಗಳು ಅವರಿಗೆ ಒಲಿದು ಬಂದಿಲ್ಲ ಎಂಬ ದೂರುಗಳು ಅಭಿಮಾನಿಗಳಿಂದ ಕೇಳಿಬರುತ್ತಲೇ ಇದೆ. ಶ್ರೀನಾಥ್​ಗೆ ಸಿಗಬೇಕಾದ ಅರ್ಹ ಶ್ರೇಯ ಅವರಿಗೆ ಸಿಗಲಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಶಾನ್​ ಪೊಲ್ಲಾಕ್​ ಕೂಡ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.

1969ರ ಆಗಸ್ಟ್ 31ರಂದು ಹಾಸನದ ಜಾವಗಲ್​ನಲ್ಲಿ ಜನಿಸಿದ ಶ್ರೀನಾಥ್​, ಮೈಸೂರಿನಲ್ಲಿ ಶಾಲಾ-ಕಾಲೇಜು ದಿನಗಳಲ್ಲಿ ಕ್ರಿಕೆಟ್​ನತ್ತ ಆಕರ್ಷಿತರಾಗಿದ್ದರು. 1991ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ ಶ್ರೀನಾಥ್​, 67 ಟೆಸ್ಟ್​ ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 10 ಬಾರಿ 5 ವಿಕೆಟ್​ ಗೊಂಚಲುಗಳ ಸಹಿತ 236 ವಿಕೆಟ್​ ಕಬಳಿಸಿದ್ದರೆ, ಏಕದಿನದಲ್ಲಿ 3 ಬಾರಿ 5 ವಿಕೆಟ್​ ಗೊಂಚಲುಗಳ ಸಹಿತ 315 ವಿಕೆಟ್​ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 86 ರನ್​ಗೆ 8 ವಿಕೆಟ್​ ಮತ್ತು ಏಕದಿನದಲ್ಲಿ 23 ರನ್​ಗೆ 5 ವಿಕೆಟ್​ ಕಬಳಿಸಿದ್ದು ಅವರ ಶ್ರೇಷ್ಠ ನಿರ್ವಹಣೆಯಾಗಿದೆ. ಬ್ಯಾಟಿಂಗ್​ನಲ್ಲೂ ಉಪಯುಕ್ತರಾಗಿದ್ದ ಶ್ರೀನಾಥ್​, ಟೆಸ್ಟ್​ನಲ್ಲಿ 1,009 ಮತ್ತು ಏಕದಿನದಲ್ಲಿ 883 ರನ್​ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 300ಕ್ಕೂ ಅಧಿಕ ವಿಕೆಟ್​ ಕಬಳಿಸಿದ ಭಾರತದ ಮೊದಲ ವೇಗದ ಬೌಲರ್​ ಎಂಬ ಹೆಗ್ಗಳಿಕೆ ಅವರದಾಗಿದೆ.

1992, 1996, 1999 ಮತ್ತು 2003ರ ಏಕದಿನ ವಿಶ್ವಕಪ್​ಗಳಲ್ಲಿ ಆಡಿದ್ದ ಶ್ರೀನಾಥ್​, ಜಹೀರ್​ ಖಾನ್​ ಜತೆಗೆ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಕಬಳಿಸಿದ ಭಾರತೀಯ ವೇಗಿ ಎಂಬ ಹೆಗ್ಗಳಿಕೆ ಹಂಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ (ಕೆಎಸ್​ಸಿಎ)ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net