More

    ಕರೊನಾ ಗೆದ್ದು ಬಾ, ದೀಪಕ್​ ಚಹರ್​ ಚೇತರಿಕೆಗೆ ಹಾರೈಸಿ ಅಕ್ಕ-ತಮ್ಮನಿಂದ ಭಾವನಾತ್ಮಕ ಸಂದೇಶ

    ನವದೆಹಲಿ: ಟೀಮ್​ ಇಂಡಿಯಾ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ತಂಡದ ವೇಗಿ ದೀಪಕ್​ ಚಹರ್​ ಕರೊನಾ ಪಾಸಿಟಿವ್​ ಆಗಿದ್ದಾರೆ. ಇದರಿಂದಾಗಿ ಚೆನ್ನೈ ಸೂಪರ್​ಕಿಂಗ್ಸ್ ತಂಡದ ಐಪಿಎಲ್​ ಸಿದ್ಧತೆಗೆ ದೊಡ್ಡ ಹಿನ್ನೆಡೆಯಾಗಿದೆ. ಈ ನಡುವೆ ದೀಪಕ್​ ಚಹರ್​ ಶೀಘ್ರದಲ್ಲೇ ಕರೊನಾ ವೈರಸ್​ ವಿರುದ್ಧ ಗೆದ್ದು, ಗುಣಮುಖರಾಗಿ ಬರಲಿ ಎಂದು ಅವರ ಅಕ್ಕ ಮಾಲತಿ ಚಹರ್​ ಮತ್ತು ಕಿರಿಯ ಸಹೋದರ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ಸ್ಪಿನ್ನರ್​ ರಾಹುಲ್​ ಚಹರ್​ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ.

    ರೂಪದರ್ಶಿಯೂ ಆಗಿರುವ ಮಾಲತಿ ಚಹರ್​ ಅವರು, ‘ನೀನೊಬ್ಬ ನಿಜವಾದ ವಾರಿಯರ್​. ಹೋರಾಡಲೆಂದೇ ಹುಟ್ಟಿರುವೆ. ಈ ಕತ್ತಲೆಯ ರಾತ್ರಿ ಕಳೆದ ಬಳಿಕ ಬೆಳಕಿನ ದಿನಗಳು ಬರಲಿವೆ. ಈ ಹಿಂದಿನಂತೆಯೇ ನೀನು ಬಲಿಷ್ಠವಾಗಿ ಮರಳುವ ವಿಶ್ವಾಸವಿದೆ. ನೀನು ಮತ್ತೊಮ್ಮೆ ಆರ್ಭಟಿಸುವುದನ್ನು ನೋಡಲು ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ಕಾಯುತ್ತಿರುವೆ’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಲಾಕ್​ಡೌನ್​ ತೆರವಾದ ಆರಂಭದ ದಿನಗಳಲ್ಲಿ ಮಾಲತಿ ಅವರು ದೀಪಕ್​ ಚಹರ್​ಗೆ ಅಭ್ಯಾಸದ ವೇಳೆ ಸಾಥ್​ ನೀಡಿದ್ದರು ಮತ್ತು ಅವರ ಎಸೆತಗಳ ಎದುರು ಬ್ಯಾಟಿಂಗ್​ ಕೂಡ ಮಾಡಿ ಗಮನಸೆಳೆದಿದ್ದರು.

    ಐಪಿಎಲ್​ ಟೂರ್ನಿಗಾಗಿ ಮುಂಬೈ ಇಂಡಿಯನ್ಸ್​ ತಂಡದೊಂದಿಗೆ ಯುಎಇಯಲ್ಲೇ ಇರುವ ರಾಹುಲ್​ ಚಹರ್​, ಕೂಡ ಅಣ್ಣನಿಗೆ ಧೈರ್ಯತುಂಬುವ ಸಂದೇಶವನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ. ‘ಸಹೋದರ ಬಲಿಷ್ಠವಾಗಿರು. ನಿನ್ನ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿರುವೆ ಮತ್ತು ನನ್ನ ಎಲ್ಲ ಪ್ರಾರ್ಥನೆಗಳು ನಿನ್ನೊಂದಿಗೆ ಇವೆ. ಗೆಟ್​ ವೆಲ್​ ಸೂನ್​’ ಎಂದು ರಾಹುಲ್​ ಚಹರ್​ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ನಿಗದಿಯಂತೆ ಐಪಿಎಲ್​ ಆರಂಭದ ಬಗ್ಗೆ ಅನುಮಾನ ಮೂಡಿಸಿದೆ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು

    ಈ ನಡುವೆ ದೀಪಕ್​ ಚಹರ್​ ಅವರು ಈ ಹಿಂದೆ, ಸಿಎಸ್​ಕೆ ತಂಡದ ಆಟಗಾರರ ಜತೆಗೆ ಪೋಸ್​ ನೀಡುವಾಗ ಮಾಸ್ಕ್​ ಧರಿಸದೆ ಇದ್ದ ಬಗ್ಗೆ ನೀಡಿರುವ ಪ್ರತಿಕ್ರಿಯೆ ಈಗ ವೈರಲ್​ ಆಗಿದೆ. ಸಿಎಸ್​ಕೆ ತಂಡದ ಚಿತ್ರಕ್ಕೆ ಕಮೆಂಟ್​ ಹಾಕಿದ್ದ ರಾಹುಲ್​ ಚಹರ್​, ಸಹೋದರ ಮಾಸ್ಕ್​ ಮತ್ತು ಸಾಮಾಜಿಕ ಅಂತರ ಎಲ್ಲಿ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ದೀಪಕ್​ ಚಹರ್​, ಸಹೋದರ ನಾವೆಲ್ಲರೂ ಪರೀಕ್ಷೆಯಲ್ಲಿ 2 ಬಾರಿ ನೆಗೆಟಿವ್​ ಆಗಿದ್ದೇವೆ. ಕುಟುಂಬದ ಜತೆಗಿದ್ದಾಗ ಮಾಸ್ಕ್​ ಧರಿಸುವುದಿಲ್ಲ ಎಂದು ಉತ್ತರಿಸಿದ್ದರು. ದೀಪಕ್​ ಚಹರ್​ ಕರೊನಾವನ್ನು ಲಘುವಾಗಿ ಪರಿಗಣಿಸಿದ್ದು ಮತ್ತು ಎಚ್ಚರಿಕೆ ತಪ್ಪಿದ್ದೇ ಈಗ ಮುಳುವಾಯಿತೇ ಎಂಬ ಪ್ರಶ್ನೆಗಳು ಎದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts