

ಹಾಂಗ್ರೆೌ (ಚೀನಾ): ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ಗೆ ಪೂರ್ವಭಾವಿಯಾಗಿ ಹಾಂಗ್ರೆೌನಲ್ಲಿ ಆಧುನಿಕ ಕ್ರೀಡಾಗ್ರಾಮವನ್ನು ಶನಿವಾರ ಉದ್ಘಾಟಿಸಲಾಗಿದೆ. 45 ದೇಶಗಳ 12 ಸಾವಿರ ಕ್ರೀಡಾಪಟುಗಳ ಸಹಿತ ಒಟ್ಟಾರೆ 20 ಸಾವಿರ ಮಂದಿಗೆ ವಸತಿ ವ್ಯವಸ್ಥೆಯನ್ನು ಈ ಕ್ರೀಡಾಗ್ರಾಮದಲ್ಲಿ ಮಾಡಲಾಗಿದೆ. ಜತೆಗೆ ಭೋಜನ ಶಾಲೆ, ಸಾರಿಗೆ ವ್ಯವಸ್ಥೆ ಮತ್ತು ವಿಹಾರ ಸ್ಥಳಗಳನ್ನೂ ಇದು ಒಳಗೊಂಡಿದೆ.
ಆತಿಥೇಯ ಚೀನಾದ ಸದಸ್ಯರು ಮೊದಲಿಗರಾಗಿ ಕ್ರೀಡಾಗ್ರಾಮವನ್ನು ಪ್ರವೇಶಿಸಿದ್ದು, ಈ ಸ್ವಾಗತ ಪ್ರಕ್ರಿಯೆ ಇನ್ನು ಸೆಪ್ಟೆಂಬರ್ 22ರವರೆಗೂ ಮುಂದುವರಿಯಲಿದೆ. ಏಷ್ಯಾದ ಒಲಿಂಪಿಕ್ ಕೌನ್ಸಿಲ್ನ ಪ್ರಧಾನ ನಿರ್ದೇಶಕರಾಗಿರುವ ಭಾರತದ ವಿನೋದ್ ಕುಮಾರ್ ತಿವಾರಿ, ಕ್ರೀಡಾಗ್ರಾಮವನ್ನು ಸುಂದರ ಮತ್ತು ಅದ್ಭುತವಾದುದು ಎಂದು ಬಣ್ಣಿಸಿದ್ದಾರೆ.
ಅತ್ಯಂತ ಆಧುನಿಕ, ಪರಿಸರ ಸ್ನೇಹಿಯಾಗಿರುವ ಕ್ರೀಡಾಗ್ರಾಮದಲ್ಲಿ ಬಸ್ಗಳು ಚಾಲಕ ರಹಿತವಾಗಿವೆ ಮತ್ತು 5ಜಿ ವ್ಯವಸ್ಥೆಗಳನ್ನು ಒಳಗೊಂಡಿದೆ. "ಝೀರೋ ವೇಸ್ಟ್ ಏಷ್ಯನ್ ಗೇಮ್ಸ್' ಧ್ಯೇಯದೊಂದಿಗೆ ಚೀನಾ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಏಷ್ಯಾಡ್ ಅಧಿಕೃತ ಆರಂಭಕ್ಕೆ ಮೊದಲೇ ಸೆಪ್ಟೆಂಬರ್ 19ರಿಂದ ಫುಟ್ಬಾಲ್, ಮಹಿಳಾ ಕ್ರಿಕೆಟ್ ಮತ್ತು ವಾಲಿಬಾಲ್ ಸ್ಪರ್ಧೆಗಳು ಶುರುವಾಗಲಿವೆ.