ವೈಟ್ ಬಾಲ್ ಕ್ರಿಕೆಟ್​ನಲ್ಲಿ 2ನೇ ಅತ್ಯುತ್ತಮ ತಂಡ ನಿಮ್ಮದೇ! ಅದರಲ್ಲಿ ಅನುಮಾನವೇ ಇಲ್ಲ: ಮೊಹಮ್ಮದ್​ ಹಫೀಜ್

Untitled design - 2024-06-27T175758.930
Published on

ನವದೆಹಲಿ: ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ ತಂಡಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆ, ವ್ಯಂಗ್ಯ ವ್ಯಕ್ತವಾಗಿತ್ತು. ಇಂತಹ ಕಳಪೆ ಪ್ರದರ್ಶನ ತೋರಿದ ನಿಮ್ಮ ಟೀಮ್​ಗೆ ನಾಯಕತ್ವ ಬದಲಾವಣೆ ಅವಶ್ಯಕತೆ ಇದೆ. ಮೊದಲು ಕ್ಯಾಪ್ಟನ್ ಬಾಬರ್ ಆಜಂರನ್ನು ಕೆಳಗಿಳಿಸಿ, ಉತ್ತಮ ತಂಡವನ್ನು ಕಟ್ಟಿ ಎಂದು ಕ್ರಿಕೆಟ್ ಪ್ರಿಯರು, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಲಹೆ ನೀಡಿದ್ದರು. ಈ ಎಲ್ಲಾ ವಿವಾದಗಳಿಂದ ದೂರ ಉಳಿದಿದ್ದ ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್, ಪ್ರಸ್ತುತ ನಡೆಯುತ್ತಿರುವ ಟಿ20 ಸೂಪರ್ 8 ಹಂತದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ತಂಡವೊಂದಕ್ಕೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಬಲಿಷ್ಠ ತಂಡಗಳು ಎಂದು ಕರೆಸಿಕೊಂಡಿರುವ ಭಾರತ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮಧ್ಯೆ ತಮ್ಮದು ಅತ್ಯುತ್ತಮ ಟೀಮ್ ಎಂದು ಕ್ರಿಕೆಟ್ ಪ್ರಿಯರಿಗೆ ಅರ್ಥೈಸಿರುವ ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ, ಕಳೆದ ಪಂದ್ಯದಲ್ಲಿ ಆಸಿಸ್​ ಪಡೆಗೆ ಹೀನಾಯ ಸೋಲುಣಿಸುವ ಮೂಲಕ ಸೆಮಿಫೈನಲ್ ಹಂತಕ್ಕೆ ಐತಿಹಾಸಿಕವಾಗಿ ಎಂಟ್ರಿ ಕೊಟ್ಟಿತು. ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ ಈ ತಂಡಕ್ಕೆ ಇದೀಗ ಮೊಹಮ್ಮದ್​ ಹಫೀಜ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಈ ಟಿ20 ವಿಶ್ವಕಪ್​ 2024ರಲ್ಲಿ ಅದ್ಭುತವಾಗಿ ಪ್ರದರ್ಶನಗಳನ್ನು ನೀಡುತ್ತಿರುವ ಆಫ್ಘಾನಿಸ್ತಾನಕ್ಕೆ ಹ್ಯಾಟ್ಸ್ ಆಫ್. ನಿಸ್ಸಂದೇಹವಾಗಿ ದಕ್ಷಿಣ ಏಷ್ಯಾದಲ್ಲಿ 2ನೇ ಅತ್ಯುತ್ತಮ ವೈಟ್ ಬಾಲ್​ ಕ್ರಿಕೆಟ್ ತಂಡ ನಿಮ್ಮದೇ. ನೀವೆಲ್ಲರೂ ಖಂಡಿತವಾಗಿಯೂ ನಿಮ್ಮ ಕೌಶಲ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಬದ್ಧತೆಯಿಂದ ಜಗತ್ತಿನಾದ್ಯಂತದ ಅಭಿಮಾನಿಗಳನ್ನು ರಂಜಿಸಿದ್ದೀರಿ. ನಿಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ನೀವು, ನಿಮ್ಮ ಪ್ರಯಾಣದ ಬಗ್ಗೆ ಹೆಮ್ಮೆ ಪಡಬೇಕು. ಅಭಿನಂದನೆಗಳು" ಎಂದು ತಮ್ಮ ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್​) ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net