VIDEO | ಗಯಾನಾ ಕ್ರಿಕೆಟಿಗ ಸಿಂಕ್ಲೇರ್ ಸಮರ್ಸಾಲ್ಟ್ ಸಂಭ್ರಮದ ವಿಡಿಯೋ ವೈರಲ್

Kevin Sinclair web
Published on

ನವದೆಹಲಿ: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡದ ಬೌಲರ್ ಕೆವಿನ್ ಸಿಂಕ್ಲೇರ್ ವಿಕೆಟ್ ಕಬಳಿಸಿದ ಬಳಿಕ ಸಂಭ್ರಮಾಚರಣೆಯ ವೇಳೆ ಡಬಲ್ ಸಮರ್ಸಾಲ್ಟ್ ಮಾಡಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರೊನಾ ಕಾಲದಲ್ಲಿ ಕ್ರಿಕೆಟಿಗರು ಸಂಭ್ರಮ ಆಚರಿಸುವ ವೇಳೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೆವಿನ್ ಸಿಂಕ್ಲೇರ್ ವಿಶೇಷ ರೀತಿಯ ಸಂಭ್ರಮಾಚರಣೆಯೊಂದಿಗೆ ಗಮನ ಸೆಳೆದಿದ್ದಾರೆ.

ಬಾರ್ಬಡೋಸ್ ಟ್ರೈಡೆಂಟ್ಸ್ ವಿರುದ್ಧದ ಪಂದ್ಯದಲ್ಲಿ 16ನೇ ಓವರ್ ಎಸೆದ ಸ್ಪಿನ್ನರ್ ಕೆವಿನ್ ಸಿಂಕ್ಲೇರ್, ಮಿಚೆಲ್ ಸ್ಯಾಂಟ್ನರ್‌ರನ್ನು ಬೌಲ್ಡ್ ಮಾಡಿದ ಬಳಿಕ 2 ಬಾರಿ ಪಲ್ಟಿ ಹೊಡೆದು ಸಂಭ್ರಮಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಟ್ವಿಟರ್‌ನ ಟ್ವಿಟರ್ ಖಾತೆಯಲ್ಲಿ 15 ಸೆಕೆಂಡ್‌ಗಳ ಈ ವಿಡಿಯೋವನ್ನು ಹಂಚಿಕೊಂಡ ಬೆನ್ನಲ್ಲೇ ವೈರಲ್ ಆಗಿದೆ.

‘ಡಬಲ್? ಟ್ರಿಬಲ್? ಖಂಡಿತವಾಗಿಯೂ ಬಬಲ್‌ನಲ್ಲಿ ಇದು ಡಬಲ್ ಟ್ರಬಲ್! ಎಂಥಾ ಸಂಭ್ರಮಾಚರಣೆ!’ ಎಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 1.5 ಲಕ್ಷ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಐಸಿಸಿ ಕೂಡ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ಕ್ರಿಕೆಟ್ ಮೈದಾನದಲ್ಲಿ ನೀವು ನಿರೀಕ್ಷಿಸುವ ತಿರುವು ಮತ್ತು ಬೌನ್ಸ್ ಇದಲ್ಲ’ ಎಂದು ಬರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net