

ತರೌಬಾ: ಹೀನಾಯ ನಿರ್ವಹಣೆ ಮುಂದುವರಿಸಿದ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಿಂದ ಹೊರಬಿದ್ದಿದೆ. ದಿನದ ಮತ್ತೊಂದು ಪಂದ್ಯ ಮಳೆಯಿಂದ ರದ್ದುಗೊಂಡ ಹಿನ್ನೆಲೆಯಲ್ಲಿ ಸೇಂಟ್ ಕೀಟ್ಸ್ ಹಾಗೂ ನೆವಿಟ್ ಪೇಟ್ರಿಯೊಟ್ಸ್ ಟೂರ್ನಿಯಿಂದ ಹೊರಬಿದ್ದ ಮತ್ತೊಂದು ತಂಡ ಎನಿಸಿದೆ.
ಲಾರಾ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ತಂಡ 6 ವಿಕೆಟ್‌ಗಳಿಂದ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡವನ್ನು ಸೋಲಿಸಿದರೆ, ಸೇಂಟ್ ಕೀಟ್ಸ್ ಹಾಗೂ ಜಮೈಕಾ ತಲ್ಲವಾಸ್ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿತು.
ಮೊದಲು ಬ್ಯಾಟಿಂಗ್ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡ, ಇಮ್ರಾನ್ ತಾಹಿರ್ (22ಕ್ಕೆ 3) ಹಾಗೂ ರೊಮಾರಿಯೊ ಶೇರ್ಡ್ (22ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 9 ವಿಕೆಟ್‌ಗೆ 89 ರನ್ ಪೇರಿಸಿದರೆ, ಪ್ರತಿಯಾಗಿ ಗಯಾನ ಅಮೆಜಾನ್ ತಂಡ ಶೀಮ್ರೋನ್ ಹೆಟ್ಮೆಯೆರ್ (32*ರನ್, 33 ಬೌಂಡರಿ 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 14.2 ಓವರ್‌ಗಳಲ್ಲಿ 4 ವಿಕೆಟ್‌ಗೆ 90 ರನ್ ಕಲೆಹಾಕಿತು. ಈ ಗೆಲುವಿನೊಂದಿಗೆ ಗಯಾನ ತಂಡ ಲೀಗ್ ಹಂತದಲ್ಲಿ ಆಡಿದ 10 ಪಂದ್ಯಗಳಲ್ಲಿ 6ನೇ ಜಯ ದಾಖಲಿಸಿ ಮುಂದಿನ ಹಂತಕ್ಕೇರಿತು.
ಬಾರ್ಬಡೊಸ್ ಟ್ರಿಡೆಂಟ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 89 (ಮಿಚೆಲ್ ಸ್ಯಾಂಟ್ನರ್ 18, ಇಮ್ರಾನ್ ತಾಹಿರ್ 22ಕ್ಕೆ 3, ರೊಮಾರಿಯೊ ಶೇರ್ಡ್ 22ಕ್ಕೆ 3), ಗಯಾನ ಅಮೆಜಾನ್ ವಾರಿಯರ್ಸ್: 14.2 ಓವರ್‌ಗಳಲ್ಲಿ 4 ವಿಕೆಟ್‌ಗೆ 90 (ಚಂದ್ರಪಾಲ್ ಹೇಮ್‌ರಾಜ್ 28, ಹೆಟ್ಮೆಯೆರ್ 32*, ಸ್ಯಾಂಟ್ನರ್ 25ಕ್ಕೆ 1).