

ಸಿಂಗಾಪುರ/ಚೆನ್ನೈ: ಚೆಸ್ ವಿಶ್ವ ಚಾಂಪಿಯನ್ ಪಟ್ಟವೇರಿದ ಅತಿಕಿರಿಯ ಆಟಗಾರ ಎಂಬ ಐತಿಹಾಸಿಕ ಸಾಧನೆಯ ನಂತರ ಭಾವುಕರಾಗಿ ಆನಂದಬಾಷ್ಪ ಸುರಿಸಿ, ಅಭಿನಂದನೆಗಳ ಸುರಿಮಳೆಗಳಿಗೆ ತಲೆಬಾಗಿ, ಚೆಸ್ ಬೋರ್ಡ್ಗಳ ಮೇಲೆ ಹಸ್ತಾಕ್ಷರ ನೀಡಿ ಕೈದಣಿದಿದ್ದರೂ ಲೆಕ್ಕಿಸದೆ, ನಿದ್ದೆ ಇಲ್ಲದೆ ಕಣ್ಣುಗಳು ಉರಿಯುತ್ತಿದ್ದರೂ ಮುಖದ ಮೇಲೆ ಹೆಮ್ಮೆಯ ನಗು ಮೂಡಿಸುತ್ತ, ತ್ರಿವರ್ಣ ಧ್ವಜವನ್ನು ಗರ್ವದಿಂದ ಭುಜದ ಮೇಲೆ ಹಾಕಿಕೊಂಡು 18 ವರ್ಷದ ದೊಮ್ಮರಾಜು ಗುಕೇಶ್ ಶುಕ್ರವಾರ ವಿಶ್ವ ಚೆಸ್ ಚಾಂಪಿಯನ್ಷಿಪ್ ಟ್ರೋಫಿಯನ್ನು ಸ್ವೀಕರಿಸಿದರು.
ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ಗೆ 14ನೇ ಹಾಗೂ ಕೊನೇ ಕ್ಲಾಸಿಕ್ ಪಂದ್ಯದಲ್ಲಿ ಸೋಲುಣಿಸುವ ಮೂಲಕ 7.5 ಅಂಕಗಳೊಂದಿಗೆ ಗುರುವಾರ 18ನೇ ವಿಶ್ವ ಚದುರಂಗ ಚಕ್ರವರ್ತಿಯಾಗಿ ಹೊರಹೊಮ್ಮಿದ ಗುಕೇಶ್ಗೆ ಸರಿಸುಮಾರು 24 ಗಂಟೆಗಳ ಬಳಿಕ ಸಿಂಗಾಪುರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊಕೋರ್ವಿಚ್ ಟ್ರೋಫಿ ಪ್ರದಾನ ಮಾಡಿದರು. "ನಾನು ಈ ಕ್ಷಣವನ್ನು ಲಕ್ಷಾಂತರ ಸಲ ಜೀವಿಸಿರುವಂತೆ ಅನುಭವವಾಗುತ್ತಿದೆ. ಪ್ರತಿ ಮುಂಜಾನೆಯೂ ನಾನು, ಈ ಒಂದು ಕ್ಷಣದ ಕಾರಣದಿಂದಲೇ ಎದ್ದೇಳುತ್ತೇನೆ. ಈ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಮತ್ತು ಇದನ್ನು ನನಸಾಗಿಸಿಕೊಂಡಿರುವುದು ನನ್ನ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು' ಎಂದು ಗುಕೇಶ್ ಟ್ರೋಫಿ ಸ್ವೀಕರಿಸಿ ಹೇಳಿದರು.
"ಇದೊಂದು ಕನಸಿನಂಥ ಜರ್ನಿಯಾಗಿದೆ. ಹಲವಾರು ಏಳು-ಬೀಳು, ಸವಾಲುಗಳನ್ನು ಎದುರಿಸಿರುವೆ. ಆದರೆ ಹಿಂದೆ ಆಗಿ ಹೋಗಿರುವುದರಲ್ಲಿ ನಾನು ಯಾವುದನ್ನು ಬದಲಾಯಿಸಲಾರೆ. ನನ್ನ ಜತೆಗಿರುವ ಜನರಿಂದ ಇದು ಸುಂದರವೆನಿಸಿದೆ. ನನಗೆ ಆಟದಲ್ಲಿ ಪರಿಹಾರ ಕಾಣಿಸದೆ ಇದ್ದಾಗ ದೇವರೇ ನನಗೆ ದಾರಿ ತೋರಿಸುತ್ತಿದ್ದರು' ಎಂದು ಗುಕೇಶ್ ಹೇಳಿದರು.
ತಂದೆ-ತಾಯಿ ಜತೆ ಟ್ರೋಫಿ ಸಂಭ್ರಮ: ತಂದೆ ಡಾ. ರಜನಿಕಾಂತ್ ಟೂರ್ನಿಯುದ್ದಕ್ಕೂ ಗುಕೇಶ್ ಜತೆಯಲ್ಲೇ ಇದ್ದರೆ, ಗುರುವಾರದವರೆಗೂ ಚೆನ್ನೆ$ನಲ್ಲೇ ಇದ್ದ ತಾಯಿ ಡಾ. ಪದ್ಮಾ ಮಗ ಟ್ರೋಫಿ ಸ್ವೀಕರಿಸುವುದನ್ನು ನೋಡಲು ಶುಕ್ರವಾರ ಸಿಂಗಾಪುರಕ್ಕೆ ತೆರಳಿದರು. ಟ್ರೋಫಿ ಸ್ವೀಕರಿಸಿದ ಬಳಿಕ ಗುಕೇಶ್ ತಂದೆ-ತಾಯಿಗೆ ಅದನ್ನು ತೋರಿಸಿ ಸಂಭ್ರಮಿಸಿದರು.
ಸಮಾರೋಪದಲ್ಲೇ ಟ್ರೋಫಿ ಕೊನೆಗೂ ಮುಟ್ಟಿದ ಗುಕೇಶ್
ಸಮಾರೋಪ ಸಮಾರಂಭಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ಬೆಳಗ್ಗೆ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ಷಿಪ್ ಟ್ರೋಫಿಯೊಂದಿಗೆ ಫೋಟೋಸೆಷನ್ನಲ್ಲಿ ಪಾಲ್ಗೊಂಡರು. ಆದರೆ ಅವರು ಈ ವೇಳೆ ಟ್ರೋಫಿಯನ್ನು ಸ್ಪರ್ಶಿಸಲು ನಿರಾಕರಿಸಿದರು. ಸಂಜೆ ಟೂರ್ನಿಯ ಸಮಾರೋಪ ಸಮಾರಂಭದಲ್ಲೇ ಅದನ್ನು ಕೈಯಲ್ಲಿ ಹಿಡಿದುಕೊಳ್ಳುವುದಾಗಿ ಗುಕೇಶ್ ಹೇಳಿದರು. ಅಂತಿಮವಾಗಿ ಸಮಾರಂಭದ ವೇದಿಕೆಯಲ್ಲಿ ಗುಕೇಶ್ ಟ್ರೋಫಿ ತೆಗೆದುಕೊಂಡು "ವಿಶ್ವ ಚಾಂಪಿಯನ್ ಪಟ್ಟ'ದ ಸಂಭ್ರಮವನ್ನು ಆನಂದಿಸಿದರು.