

ಮೈಸೂರು: ಉತ್ತಮ ಬೌಲಿಂಗ್ ನಿರ್ವಹಣೆ ಪ್ರದರ್ಶಿಸಿದ ಆತಿಥೇಯ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ ಮೊದಲ ದಿನವೇ ಮೇಲುಗೈ ಸಾಧಿಸಿದೆ. ವೇಗಿ ವೈಶಾಕ್ ವಿಜಯಕುಮಾರ್(45ಕ್ಕೆ 3), ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್(66ಕ್ಕೆ 3) ದಾಳಿಗೆ ಕಂಗಾಲಾದ ಪ್ರವಾಸಿ ಗೋವಾ ತಂಡ ಮೊದಲ ಇನಿಂಗ್ಸ್ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದಿದೆ.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಶುಕ್ರವಾರ ಪ್ರಾರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಗೋವಾ ತಂಡ ದಿನದಂತ್ಯಕ್ಕೆ 87 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 228 ರನ್ ಪೇರಿಸಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್(10*), ಹೆರಾಂಬ್ ಪರಬ್(6*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆರಂಭಿಕ ಆಘಾತ ನೀಡಿದ ವೇಗಿಗಳು
ಪ್ರವಾಸಿ ಗೋವಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ತಂಡದ ವೇಗಿಗಳಾದ ವೈಶಾಕ್ ವಿಜಯಕುಮಾರ್ ಹಾಗೂ ವಾಸುಕಿ ಕೌಶಿಕ್ ಯಶಸ್ವಿಯಾದರು. ವೈಶಾಕ್ 4ನೇ ಓವರ್ನಲ್ಲೇ ಆರಂಭಿಕ ಇಶಾನ್ ಗಡೇಕರ್(6) ವಿಕೆಟ್ ಕಬಳಿಸಿ ಗೋವಾಗೆ ಆಘಾತ ನೀಡಿದರು. ಬಳಿಕ ಕೌಶಿಕ್ 13ನೇ ಓವರ್ನಲ್ಲಿ ಕೆ.ವಿ.ಸಿದ್ಧಾರ್ಥ್ (2) ಅವರನ್ನು ಔಟ್ ಮಾಡಿ ಒತ್ತಡ ಹೇರಿದರು. ಈ ಮಧ್ಯೆ ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್, ಸುಯಶ್ ಪ್ರಭುದೇಸಾಯಿ (24) ವಿಕೆಟ್ ಪಡೆದು ಸಾಥ್ ನೀಡಿದರು. ಪರಿಣಾಮ ಪ್ರವಾಸಿ ತಂಡ ಭೋಜನ ವಿರಾಮದ ವೇಳೆಗೆ 33 ಓವರ್ಗಳಲ್ಲಿ 60 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು.
ಪ್ರತಿರೋಧ ತೋರಿದ ಸ್ನೇಹಲ್
ಮೊದಲ ಅವಧಿಯಲ್ಲಿ ಗೋವಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರೂ, ಸ್ನೇಹಲ್ ಕೌತಾಂಕರ್(83ರನ್, 193 ಎಸೆತ, 9 ಬೌಂಡರಿ, 1 ಸಿಕ್ಸರ್) ಜೀವದಾನಗಳ ನೆರವು ಪಡೆದು ಎರಡನೇ ಅವಧಿಯಲ್ಲಿ ಕರ್ನಾಟಕ ಬೌಲರ್ಗಳನ್ನು ಕಾಡುವ ಮೂಲಕ ಪ್ರತಿರೋಧ ತೋರಿದರು. ಸುಯಶ್ ಪ್ರಭುದೇಸಾಯಿ ಪೆವಿಲಿಯನ್ ಸೇರಿದ ಬಳಿಕ ನಾಯಕ ದರ್ಶನ್ ಮಿಸಾಲ್ (39) ಜತೆಗೂಡಿ ಇನಿಂಗ್ಸ್ ಕಟ್ಟಲು ಮುಂದಾದರು. 4ನೇ ವಿಕೆಟ್ಗೆ 182 ಎಸೆತದಲ್ಲಿ 82 ರನ್ ಗಳಿಸುವ ಮೂಲಕ ಆರಂಭಿಕ ಆಘಾತಕ್ಕೆ ಸಿಲುಕಿದ್ದ ತಂಡಕ್ಕೆ ನೆರವಾದರು. 56ನೇ ಓವರ್ನಲ್ಲಿ ದರ್ಶನ್ ಮಿಸಾಲ್ ವಿಕೆಟ್ ಪಡೆದ ರೋಹಿತ್ಕುಮಾರ್ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ 58ನೇ ಓವರ್ನಲ್ಲಿ ದೀಪರಾಜ್ ಗಾಂವ್ಕರ್(0) ಔಟ್ ಮಾಡುವ ಮೂಲಕ ಗೋವಾ ತಂಡಕ್ಕೆ ಶಾಕ್ ನೀಡಿದರು. ಬಳಿಕ ಸಮರ್ ದುಭಾಷಿ ಜತೆಗೂಡಿದ ಸ್ನೇಹಲ್ ಕೌತಾಂಕರ್ 6ನೇ ವಿಕೆಟ್ಗೆ 81 ಎಸೆತಗಳಲ್ಲಿ 50 ರನ್ ಪೇರಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರೂ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎಂ.ವೆಂಕಟೇಶ್ ಎಸೆದ 75ನೇ ಓವರ್ನಲ್ಲಿ ನಿಕಿನ್ ಜೋಸ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಕೈಕೊಟ್ಟ ಫೀಲ್ಡಿಂಗ್
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಲ್ಯದಿಂದ ಸೋತಿರುವ ಕರ್ನಾಟಕ ಈ ಬಾರಿ ಮೊದಲ ದಿನವೇ ಗೋವಾ ತಂಡವನ್ನು ಆಲೌಟ್ ಬಲೆಗೆ ಬೀಳಿಸಲು ಫೀಲ್ಡಿಂಗ್ ವೈಲ್ಯ ಅಡ್ಡಿಯಾಯಿತು. ಸ್ನೇಹಲ್ 2 ರನ್ ಗಳಿಸಿದ್ದಾಗ ವೆಂಕಟೇಶ್ ಓವರ್ನಲ್ಲಿ ನೀಡಿದ್ದ ಕ್ಯಾಚ್ಗಳನ್ನು ಮನೀಶ್ ಪಾಂಡೆ ಕೈಚೆಲ್ಲಿದ್ದರು. ಸಮರ್ ದುಭಾಷಿ ಕೂಡ 2 ಜೀವದಾನ ಪಡೆದರು.
ನಿಶ್ಚಲ್, ವೆಂಕಟೇಶ್ ಕಣಕ್ಕೆ
ಗಾಯಾಳು ವೇಗಿ ಪ್ರಸಿದ್ಧಿ ಕೃಷ್ಣ ಬದಲು ಆಡಿದ ಎಂ.ವೆಂಕಟೇಶ್ ಒಂದು ವಿಕೆಟ್ ಕಬಳಿಸಿ ಗಮನ ಸೆಳೆದರು. ಆರ್.ಸಮರ್ಥ್ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಅವರ ಬದಲು ಡಿ.ನಿಶ್ಚಲ್ ಆಡುತ್ತಿದ್ದಾರೆ. ಗೋವಾ ಪರ ಆಡುತ್ತಿರುವ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಆಕರ್ಷಣೆಯ ಕೇಂದ್ರವಾಗಿದ್ದಾರೆ.
ಗೋವಾ: 87 ಓವರ್ಗಳಲ್ಲಿ 8 ವಿಕೆಟ್ಗೆ 228 (ಇಶಾನ್ ಗಡೇಕರ್ 6, ಕೆ.ವಿ. ಸಿದ್ಧಾರ್ಥ್ 2, ಸುಯಶ್ ಪ್ರಭುದೇಸಾಯಿ 24, ಸ್ನೇಹಲ್ ಕೌತಾಂಕರ್ 83, ದರ್ಶನ್ ಮಿಸಾಲ್ 39, ದೀಪರಾಜ್ 0, ಸಮರ್ 19, ಅರ್ಜುನ್ 10*, ಮೋಹಿತ್ 16, ಹೆರಾಂಬ್ 6*, ವಿ. ಕೌಶಿಕ್ 36ಕ್ಕೆ 7, ವೈಶಾಕ್ 45ಕ್ಕೆ 3, ವೆಂಕಟೇಶ್ 25ಕ್ಕೆ 1, ರೋಹಿತ್ 66ಕ್ಕೆ 3).