ಥಾಮಸ್​-ಉಬೆರ್​ ಕಪ್​ನಲ್ಲಿ ಭಾರತ ತಂಡ ಶುಭಾರಂಭ

web bad
Published on

ಚೆಂಗ್​ಡು (ಚೀನಾ): ಭಾರತದ ಪುರುಷರ ಮತ್ತು ಮಹಿಳಾ ಬ್ಯಾಡ್ಮಿಂಟನ್​ ತಂಡಗಳು ಕ್ರಮವಾಗಿ ಪ್ರತಿಷ್ಠಿತ ಥಾಮಸ್​ ಕಪ್​ ಮತ್ತು ಉಬೆರ್​ ಕಪ್​ ಟೂರ್ನಿಗಳಲ್ಲಿ ಶುಭಾರಂಭ ಕಂಡಿವೆ. ಪುರುಷರ ವಿಭಾಗದಲ್ಲಿ ಹಾಲಿ ಚಾಂಪಿಯನ್​ ಆಗಿ ಅಭಿಯಾನ ಆರಂಭಿಸಿದ ಭಾರತ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್​ ಎದುರು 4-1 ಅಂತರದಿಂದ ಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಭಾರತದ ಯುವ ತಂಡ 4-1ರಿಂದ ಕೆನಡ ತಂಡವನ್ನು ಮಣಿಸಿತು.

ಶನಿವಾರದ ಸಿ ಗುಂಪಿನ ಪಂದ್ಯದಲ್ಲಿ ಎಚ್​ಎಸ್​ ಪ್ರಣಯ್​ ಆರಂಭಿಕ ಸಿಂಗಲ್ಸ್​ನಲ್ಲಿ ಆಘಾತ ಎದುರಿಸಿದರು. ಬಳಿಕ ಲಕ್ಷ್ಯ ಸೇನ್​, ಕೆ. ಶ್ರೀಕಾಂತ್​ ಸಿಂಗಲ್ಸ್​ ಮತ್ತು ಚಿರಾಗ್​ ಶೆಟ್ಟಿ-ಸಾತ್ವಿಕ್​ ಸಾಯಿರಾಜ್​, ಎಂಆರ್​ ಅರ್ಜುನ್​-ಧ್ರುವ ಕಪಿಲ ಡಬಲ್ಸ್​ನಲ್ಲಿ ಗೆದ್ದು ಭಾರತಕ್ಕೆ ಗೆಲುವಿನ ಆರಂಭ ಒದಗಿಸುವಲ್ಲಿ ಯಶಸ್ವಿಯಾದರು. ಸಾತ್ವಿಕ್​-ಚಿರಾಗ್​ ಜೋಡಿ ಪೀರಚೈ-ಪಕ್ಕಪೊನ್​ ಜೋಡಿಯನ್ನು 21-19, 19-21, 21-12ರಿಂದ ಮಣಿಸಿದರೆ, ಲಕ್ಷ್ಯ ಸೇನ್​ 21-12, 19-21, 21-16ರಿಂದ ಪನಿಚಪೊನ್​ ತೀರರತ್ಸಕುಲ್​ ವಿರುದ್ಧ ಗೆದ್ದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಭಾರತ ಸೋಮವಾರ ಇಂಗ್ಲೆಂಡ್​ ವಿರುದ್ಧ ಆಡಲಿದೆ.

ಮಹಿಳಾ ವಿಭಾಗದಲ್ಲಿ ಅಶ್ಮಿತಾ ಚಾಲಿಹ ಮೊದಲ ಪಂದ್ಯದಲ್ಲೇ ಗೆದ್ದು ಆತ್ಮವಿಶ್ವಾಸ ವೃದ್ಧಿಸಿದರೆ, ಡಬಲ್ಸ್​ನಲ್ಲಿ ಪ್ರಿಯಾ ಕೆ.-ಶ್ರುತಿ ಮಿಶ್ರಾ, ಸಿಂಗಲ್ಸ್​ನಲ್ಲಿ ಇಶಾರಾಣಿ ಬರುವಾ ಗೆಲುವು ಸಾಧಿಸಿದರು. ನಂತರ 2ನೇ ಡಬಲ್ಸ್​ನಲ್ಲಿ ಸಿಮ್ರನ್​ ಸಿಂಘಿ-ರಿತಿಕಾ ಥಕೆರ್​ ಸೋತರೆ, ಕೊನೇ ಸಿಂಗಲ್ಸ್​ನಲ್ಲಿ ಅನ್ಮೋಲ್​ ರ್ಖಬ್​ ಗೆದ್ದು ಬೀಗಿದರು. ಮಹಿಳೆಯರಿಗೆ ಭಾನುವಾರ ಸಿಂಗಾಪುರದ ಸವಾಲು ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net