

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮಾರ್ಚ್ 29 ರಿಂದ ಆರಂಭಗೊಳ್ಳಬೇಕಿದ್ದ ವಿಶ್ವದ ಶ್ರೀಮಂತ ಲೀಗ್ ಕೋವಿಡ್-19ರಿಂದಾಗಿ ಮುಂದೂಡಲಾಗಿತ್ತು. ಎಲ್ಲೆಡೆ ಐಪಿಎಲ್ ಕುರಿತೇ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಈ ವೇಳೆ ಆಸ್ಟ್ರೆಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಬೆಸ್ಟ್ ಐಪಿಎಲ್ ಇಲೆವೆನ್ ತಂಡ ಆಯ್ಕೆಮಾಡಿದ್ದಾರೆ. ಆದರೆ, ಐಪಿಎಲ್ನ ಅತ್ಯಂತ ಯಶಸ್ವಿ ಆಟಗಾರ ಹಾಗೂ ನಾಯಕ ಎನಿಸಿರುವ ರೋಹಿತ್ ಶರ್ಮ ಅವರಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿಲ್ಲ.
ಮ್ಯಾಕ್ಸ್ವೆಲ್ ಬೆಸ್ಟ್ ಐಪಿಎಲ್ ಇಲೆವೆನ್:
ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಗ್ಲೆನ್ ಮ್ಯಾಕ್ಸ್ವೆಲ್, ಆಂಡ್ರೆ ರಸೆಲ್, ಎಂಎಸ್ ಧೋನಿ (ವಿಕೀ), ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಮೋಹಿತ್ ಶರ್ಮ.
ರೋಹಿತ್ ಶರ್ಮರಂಥ ಸ್ಟಾರ್ ಆಟಗಾರನಿಗೆ ಕೊಕ್ ನೀಡಿರುವ ಮ್ಯಾಕ್ಸ್ವೆಲ್, ಮೋಹಿತ್ ಶರ್ಮಗೆ ಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ. ಆರಂಭಿಕರಾಗಿ ಕೊಹ್ಲಿ, ವಾರ್ನರ್ ಇದ್ದರೆ, ಎಡಿಬಿ, ಸುರೇಶ್ ರೈನಾ ಕ್ರಮವಾಗಿ 3 ಹಾಗೂ 4ನೇ ಕ್ರಮಾಂಕದಲ್ಲಿದ್ದರೆ, ಸ್ವತಃ ಮ್ಯಾಕ್ಸ್ವೆಲ್ 5ನೇ ಕ್ರಮಾಂಕ ಪಡೆದುಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬಜ್ಜಿ, ಭುವನೇಶ್ವರ ಕುಮಾರ್, ಬುಮ್ರಾ ಹಾಗೂ ಮೋಹಿತ್ ಶರ್ಮ ಹೆಸರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಹೆಸರು ಕೈಬಿಟ್ಟಿರುವುದು ಹಲವು ಅಚ್ಚರಿಗೂ ಕಾರಣವಾಗಿದೆ. ಐಪಿಎಲ್ ಇತಿಹಾಸದಲ್ಲಿ 5 ಬಾರಿ ಟ್ರೋಫಿ ಗೆದ್ದಿರುವ ಏಕೈಕ ಆಟಗಾರ ಎನಿಸಿದ್ದಾರೆ. ಅದರಲ್ಲೂ 4 ಬಾರಿ ನಾಯಕನಾಗಿ ಈ ಸಾಧನೆ ಮಾಡಿದ್ದಾರೆ. ಇದುವರೆಗೂ 4898 ರನ್ಗಳಿಸಿ ಲೀಗ್ನಲ್ಲಿ ಅತಿಹೆಚ್ಚು ರನ್ಗಳಿಸಿರುವ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.