

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ದಿನಗಣನೆ ಆರಂಭಗೊಂಡಿದೆ. ಇಂದಿನಿಂದ ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಸೇರಿದಂತೆ ಬಹುತೇಕ ತಂಡಗಳ ಆಟಗಾರರು ಕ್ವಾರಂಟೈನ್ ಅವಧಿ ಶುರುಮಾಡಿವೆ. ಸೆ.19 ರಿಂದ ಆರಂಭವಾಗಲಿರುವ 13ನೇ ಲೀಗ್ಗೆ ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರದ ಹಕ್ಕುಹೊಂದಿದೆ. ಕೋವಿಡ್-19 ಮಹಾಮಾರಿ ಜಾಗತಿಕವಾಗಿ ಆರ್ಥಿಕ ಹೊಡೆತ ನೀಡಿದೆ. ಆದರೆ, ಸ್ಟಾರ್ ಸ್ಪೋರ್ಟ್ಸ್ ಮಾತ್ರ ಜಾಹೀರಾತು ದರವನ್ನು ಕಡಿಮೆ ಮಾಡಿಲ್ಲ. ಪ್ರತಿ 10 ಸೆಕೆಂಡ್ಗಳ ಜಾಹೀರಾತಿಗೆ 8 ರಿಂದ 10 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಿದೆ. ಇದರಿಂದ ಒಟ್ಟಾರೆ 3 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ ಸ್ಟಾರ್ ವಾಹಿನಿ.
ಮಹಾಮಾರಿ ಕೋವಿಡ್-19 ನಡುವೆಯೂ 6 ತಿಂಗಳ ಬಳಿಕ 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಸಕಲ ವೇದಿಕೆ ದೂರದ ಅರಬ್ ರಾಷ್ಟ್ರದಲ್ಲಿ ಸಿದ್ಧವಾಗಿದೆ. ಭಾರತೀಯ ಪಾಲಿಗೆ ಕ್ರೀಡಾಹಬ್ಬ ಎನಿಸಿರುವ ಚುಟುಕು ಕ್ರಿಕೆಟ್ ಸಮರ 53 ದಿನಗಳ ಕಾಲ ಯುಎಇಯಲ್ಲಿ ನಡೆಯಲಿದೆ. ದೀಪಾವಳಿ ಹಬ್ಬದ ವೇಳೆಯಾಗಿರುವುದರಿಂದ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ತನ್ನ ಜಾಹೀರಾತು ದರದಲ್ಲಿ ಕಡಿಮೆ ಮಾಡದಿರಲು ನಿರ್ಧರಿಸಿದೆ. ಬಿಸಿಸಿಐಗೆ ನೀಡುವ ವಾರ್ಷಿಕ 3270 ಕೋಟಿ ರೂಪಾಯಿ ಮೊತ್ತದಲ್ಲಿ ಕಡಿಮೆ ಮಾಡದ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಕೂಡ ಜಾಹೀರಾತು ದರದಲ್ಲಿ ರಾಜಿಯಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಸಿಬಿ ಆಟಗಾರರ ಕ್ವಾರಂಟೈನ್ ಶುರು
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರತಿ 10 ಸೆಕೆಂಡ್ಗೆ 25 ಲಕ್ಷ ರೂಪಾಯಿ ನಿಗದಿಪಡಿಸಿತ್ತು. ಇತರ ಪಂದ್ಯಗಳಿಗೆ 16 ರಿಂದ 18 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಐಪಿಎಲ್ನ ಜಾಹೀರಾತು ದರ ಕಡಿಮೆ ಎಂದು ಹೇಳಲಾಗುತ್ತಿದೆ.