

Glenn Maxwell : ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಸಹ ಆಟಗಾರರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಮ್ಯಾಕ್ಸ್ವೆಲ್ ಆಸಿಸ್ ತಂಡದ ಸ್ಟಾರ್ ಆಲ್ರೌಂಡರ್ ಆಗಿದ್ದು, ಮುಂಬರುವ ಆಸ್ಟ್ರೇಲಿಯಾದ ಟಿ-20 ಸರಣಿಯಲ್ಲಿ ತಂಡದ ನಾಯಕತ್ವಕ್ಕೆ ಪರಿಗಣಿಸಲಾಗಿದೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಮೊದಲು, ಕೊಹ್ಲಿ ಮತ್ತು ಮ್ಯಾಕ್ಸ್ವೆಲ್ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಗಳಲ್ಲಿ ಎದುರಾಳಿಗಳಾಗಿ ಹೋರಾಡಿದ್ದಾರೆ.
ಮ್ಯಾಕ್ಸಿ ಎಂದೇ ಕ್ರೀಡಾಭಿಮಾನಿಗಳ ಮನದಲ್ಲಿ ಭದ್ರವಾದ ಸ್ಥಾನ ಪಡೆದಿರುವ ಮ್ಯಾಕ್ಸ್ವೆಲ್, ಇತ್ತೀಚೆಗಷ್ಟೇ ತನ್ನ ಬರವಣಿಗೆಯಲ್ಲಿ ಮೂಡಿಬಂದಿರುವ 'ದಿ ಶೋಮ್ಯಾನ್' ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಕೊಹ್ಲಿ ಮತ್ತು ತಮ್ಮ ನಡುವೆ ನಡೆದ ಸ್ವಾರಸ್ಯಕರ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಈ ಹಿಂದೆ ಕೊಹ್ಲಿ, ಮ್ಯಾಕ್ಸ್ವೆಲ್ ಅವರನ್ನು ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರಂತೆ. ಮ್ಯಾಕ್ಸ್ವೆಲ್ ಅವರು ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಅಲ್ಲಿಂದ ಬಿಡುಗಡೆಯಾದಾಗ ಆರ್ಸಿಬಿಗೆ ಸೇರಿಸಿಕೊಳ್ಳುವಂತೆ ಆಗಿನ ನಾಯಕ ಕೊಹ್ಲಿ, ಫ್ರಾಂಚೈಸಿಗೆ ಸಲಹೆ ನೀಡಿದರು. ಕೊಹ್ಲಿಯ ಈ ಬೆಂಬಲಕ್ಕೆ ಮ್ಯಾಕ್ಸ್ವೆಲ್ ತಮ್ಮ ಪುಸ್ತಕದಲ್ಲಿ ಧನ್ಯವಾದ ಸಹ ಹೇಳಿದ್ದಾರೆ.
2021ರಲ್ಲಿ ಮ್ಯಾಕ್ಸ್ವೆಲ್ ಆರ್ಸಿಬಿ ತಂಡಕ್ಕೆ ಆಗಮಿಸಿದರು. ಅದಕ್ಕೂ ನಾಲ್ಕು ವರ್ಷಗಳ ಮುಂಚೆ ಅಂದರೆ, 2017ರಲ್ಲಿ ಆಸ್ಟ್ರೇಲಿಯಾ, ಭಾರತ ಪ್ರವಾಸ ಕೈಗೊಂಡಿತ್ತು. ರಾಂಚಿಯಲ್ಲಿ ನಡೆದ ಟೆಸ್ಟ್ ಸರಣಿಯ ಮೂರನೇ ಪಂದ್ಯದ ವೇಳೆ ಕೊಹ್ಲಿಯ ಬಲ ಭುಜಕ್ಕೆ ಗಾಯವಾಗಿತ್ತು. ಇದಾದ ನಂತರ ಆಸ್ಟ್ರೇಲಿಯಾದ ಫೀಲ್ಡಿಂಗ್ ಸಮಯ ಬಂದಾಗ ಮ್ಯಾಕ್ಸ್ವೆಲ್ ಅವರು ಕೊಹ್ಲಿಯನ್ನು ಹಿಡಿದುಕೊಂಡು ಬಲ ಭುಜವನ್ನು ಒತ್ತಿ ಕೀಟಲೆ ಮಾಡಿದ್ದರು.
ಈ ಘಟನೆ ಕೊಹ್ಲಿಯನ್ನು ಕೆರಳಿಸಿತ್ತು. ಇದಾದ ಬಳಿಕ ಮ್ಯಾಕ್ಸಿಯನ್ನು Instagram ನಲ್ಲಿ ಕೊಹ್ಲಿ ನಿರ್ಬಂಧಿಸಿದರು. ಇದಾದ ವರ್ಷಗಳ ಬಳಿಕ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡಾಗ ಇನ್ಸ್ಟಾಗ್ರಾಮ್ನಲ್ಲಿ ಕೊಹ್ಲಿಯನ್ನು ಹುಡುಕಿದರೂ ಮಾಕ್ಸಿಗೆ ಅವರು ಸಿಗಲಿಲ್ಲ. ಬಳಿಕ ಈ ಬಗ್ಗೆ ಕೊಹ್ಲಿ ಬಳಿ ಮ್ಯಾಕ್ಸಿ ವಿಚಾರಿಸಿದರು. ಗೇಲಿ ಮಾಡಿದ್ದರಿಂದ ಬ್ಲಾಕ್ ಮಾಡಿದ್ದಾಗಿ ಕೊಹ್ಲಿ ಬಹಿರಂಗಪಡಿಸಿದರು. ನಂತರ ಕೊಹ್ಲಿ, ಮ್ಯಾಕ್ಸ್ವೆಲ್ ಅವರನ್ನು ಅನ್ಬ್ಲಾಕ್ ಮಾಡಿದರು ಮತ್ತು ಇಬ್ಬರೂ ಉತ್ತಮ ಸ್ನೇಹಿತರಾದರು ಎಂದು ಮ್ಯಾಕ್ಸ್ವೆಲ್ ಪುಸ್ತಕದಲ್ಲಿ ಹೇಳಿದ್ದಾರೆ.
2021ರ ಋತುವಿನಲ್ಲಿ ಆರ್ಸಿಬಿಗೆ ಸೇರ್ಪಡೆಗೊಂಡ ಮ್ಯಾಕ್ಸ್ವೆಲ್ ಆ ಋತುವಿನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆ ಋತುವಿನಲ್ಲಿ RCB 14.25 ಕೋಟಿಗೆ ಮ್ಯಾಕ್ಸಿಯನ್ನು ಖರೀದಿಸಿತು. (ಏಜೆನ್ಸೀಸ್)