

ನವದೆಹಲಿ: ಆಸ್ಟ್ರೇಲಿಯಾದ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಬುಧವಾರ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನೆದರ್ಲೆಂಡ್ ಎದುರು 40 ಎಸೆತಗಳಲ್ಲೇ ಸ್ಪೋಟಕ ಶತಕ ಸಿಡಿದರು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದ ಅತಿವೇಗದ ಶತಕ ಸಾಧಕ ಎನಿಸಿದರು. ಇದರ ಬೆನ್ನಲ್ಲೇ ಅವರು ತಮ್ಮ ಬ್ಯಾಟ್ಅನ್ನು ಮಗುವಿನಂತೆ ಹಿಡಿದ ಸಂಭ್ರಮಿಸಿದರು. ಅದರ ಹಿಂದೆ ವಿಶೇಷವಾದ ಕಾರಣವೊಂದಿದೆ!
ಆಸೀಸ್ ಇನಿಂಗ್ಸ್ನಲ್ಲಿ ವಾರ್ನರ್ ನಿರ್ಗಮನದ ಬಳಿಕ 40ನೇ ಓವರ್ನಲ್ಲಿ ಕ್ರೀಸ್ಗಿಳಿದ ಮ್ಯಾಕ್ಸ್ವೆಲ್ ಬೌಂಡರಿ-ಸಿಕ್ಸರ್ಗಳ ಮಳೆ ಹರಿಸಿದರು. ಮೊನಚಿಲ್ಲದ ಡಚ್ಚರ ದಾಳಿಯನ್ನು ಪುಡಿಗಟ್ಟಿದ ಮ್ಯಾಕ್ಸ್ವೆಲ್, ಪಂದ್ಯದ 49ನೇ ಓವರ್ನಲ್ಲಿ 28 ರನ್ ಕಸಿದು ಕೇವಲ 40 ಎಸೆತಗಳಲ್ಲಿ ವಿಶ್ವಕಪ್ನ ವೇಗದ ಶತಕ ಸಿಡಿಸಿದರು. ಬಳಿಕ ಬ್ಯಾಟನ್ನೇ ಮಗುವಿನಂತೆ ಹಿಡಿದು, ಇತ್ತೀಚೆಗೆ ಜನಿಸಿದ್ದ ತನ್ನ ಮೊದಲ ಮಗುವಿಗೆ ಶತಕವನ್ನು ಅರ್ಪಿಸಿದರು. ವಿಶ್ವಕಪ್ಗೆ ಮುನ್ನ ಸೆಪ್ಟೆಂಬರ್ 15ರಂದು ಅವರ ಪತ್ನಿ ಹಾಗೂ ಭಾರತದ ಮೂಲದ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಏಳನೇ ವಿಕೆಟ್ಗೆ ನಾಯಕ ಪ್ಯಾಟ್ ಕಮ್ಮಿನ್ಸ್ (12*) ಜತೆಯಾಗಿ 44 ಎಸೆತಗಳಲ್ಲಿ 103 ರನ್ ಚಚ್ಚಿದರು. ಇದರಲ್ಲಿ ಮ್ಯಾಕ್ಸ್ವೆಲ್ ಒಬ್ಬರೇ 91 ರನ್ ಪೇರಿಸಿದರು. ಕೊನೇ 10 ಓವರ್ಗಳಲ್ಲಿ ಆಸೀಸ್ 131 ರನ್ ಕಸಿಯಿತು. 44 ಎಸೆತಗಳ ಇನಿಂಗ್ಸ್ನಲ್ಲಿ ಮ್ಯಾಕ್ಸ್ವೆಲ್ 9 ಬೌಂಡರಿ, 8 ಸಿಕ್ಸರ್ ಸಹಿತ 106 ರನ್ ಸಿಡಿಸಿದರು.
ಮ್ಯಾಕ್ಸ್ವೆಲ್ ಅತಿ ವೇಗದ ಶತಕ
ಏಕದಿನ ವಿಶ್ವಕಪ್ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಶತಕಗಳಿಸಿದ ಐರ್ಲೆಂಡ್ನ ಬ್ಯಾಟರ್ ಕೆವಿನ್ ಓಬ್ರಿಯನ್ (50 ಎಸೆತ) ಹೆಸರಿನಲ್ಲಿದ್ದ 12 ವರ್ಷ ಹಳೆಯ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಮ್ (49 ಎಸೆತ) ಹಾಲಿ ವಿಶ್ವಕಪ್ನ 4ನೇ ಪಂದ್ಯದಲ್ಲಿ ಮುರಿದಿದ್ದರು. ಇದೀಗ ಗ್ಲೆನ್ ಮ್ಯಾಕ್ಸ್ವೆಲ್ (40 ಎಸೆತ) ಆ ದಾಖಲೆಯನ್ನು 18 ದಿನಗಳ ಅಂತರದಲ್ಲೇ ಅಳಿಸಿಹಾಕಿದ್ದಾರೆ. ಒಟ್ಟಾರೆಯಾಗಿ ಇದು ಏಕದಿನ ಕ್ರಿಕೆಟ್ನಲ್ಲಿ ದಾಖಲಾದ 4ನೇ ವೇಗದ ಶತಕ ಎನಿಸಿದೆ. ಎಬಿ ಡಿವಿಲಿಯರ್ಸ್ (31), ಕೋರಿ ಆಂಡರ್ಸನ್ (36), ಶಾಹಿದ್ ಅಫ್ರಿದಿ (37) ಮೊದಲ 3 ಸ್ಥಾನದಲ್ಲಿದ್ದಾರೆ.