ಒಬ್ಬರ ಮೇಲ್ಯಾಕೆ ಅಷ್ಟೊಂದು ಅವಲಂಬಿತ? ಒಂದು ಸೋಲಿನಿಂದ ಅಳೆಯಬೇಡಿ: ಗಿಲ್​ಗೆ ಮಾಜಿ ಕ್ರಿಕೆಟಿಗ ಸಾಥ್​ | Shubman Gill

ವಿಜಯವಾಣಿ - 2025-06-30T123751.588
Published on

Shubman Gill: ಪ್ರಸಕ್ತ ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್​ ಸರಣಿಯಲ್ಲಿ ಮೊದಲ ಪಂದ್ಯವನ್ನು ಭಾರತ ಸೋತಿದೆ. ಇನ್ನು ಜುಲೈ 2ರಿಂದ ಆರಂಭಗೊಳ್ಳಲಿರುವ ಎರಡನೇ ಟೆಸ್ಟ್​ ಪಂದ್ಯಕ್ಕೆ ಸಜ್ಜಾಗಿರುವ ಶುಭಮನ್ ಗಿಲ್ ಪಡೆ, ದ್ವಿತೀಯ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಮೊದಲ ಟೆಸ್ಟ್​ನಲ್ಲಿ ಸೋತ ಗಿಲ್​ಗೆ ಟೀಕೆಗಳು ವ್ಯಕ್ತವಾಗಿತ್ತು. ಇದನ್ನು ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಅಜ್ರುದ್ದೀನ್​ ಖಂಡಿಸಿದ್ದಾರೆ.

"ಒಬ್ಬ ಯುವ ನಾಯಕನನ್ನು ಹೀಗೆ ಟೀಕಿಸಿ, ವ್ಯಂಗ್ಯವಾಡುವುದು ಸರಿಯಲ್ಲ. ಅದು ಮೊದಲ ಟೆಸ್ಟ್​ನಲ್ಲೇ? ಶುಭಮನ್ ಗಿಲ್​ಗೆ ಇನ್ನೂ ಒಂದಷ್ಟು ಸಮಯದ ಅಗತ್ಯವಿದೆ. ಅವರಿಗೆ ಅವಕಾಶ ಕೊಡಬೇಕು. ಕ್ಯಾಪ್ಟನ್ ಆಗಿ ಇಂಗ್ಲೆಂಡ್​ ವಿರುದ್ಧದ ಸರಣಿಯೇ ಅವರ ಮೊದಲ ಪಂದ್ಯ. ಹೀಗಿರುವಾಗ ಗಿಲ್ ನಾಯಕತ್ವದ ಕುರಿತು ಹೆಚ್ಚು ಮಾತನಾಡುವುದು ಅಥವಾ ಚರ್ಚಿಸುವುದು ಸರಿಯಲ್ಲ. ಈಗ ನಾವೆಲ್ಲರೂ ಅವರೊಂದಿಗೆ ನಿಲ್ಲುವ ಸಮಯ. ಜೊತೆಗಿದ್ದು, ಅವರಿಗೆ ಉತ್ಸಾಹ ತುಂಬಬೇಕು. ಸುಖಾಸುಮ್ಮನೇ ಅವರನ್ನು ದೂರುವುದು, ಟೀಕಿಸುವುದು ಸರಿಯಾದ ನಡೆಯಲ್ಲ" ಎಂದಿದ್ದಾರೆ.

"ನಮ್ಮಲ್ಲಿ ಒಳ್ಳೆಯ ತಂಡದ ಸಂಯೋಜನೆಯ ಅಗತ್ಯವಿದೆ. ಬಲಿಷ್ಠ ತಂಡವನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಮುಂದಿದೆ. ಬೌಲಿಂಗ್ ಯೂನಿಟ್​ನಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ. ಕೇವಲ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಮೇಲೆಯೇ ಅಷ್ಟೊಂದು ಅವಲಂಬಿತರಾದರೆ ಹೇಗೆ? ಪ್ರತಿಬಾರಿ ಆತನೇ ವಿಕೆಟ್​ ತೆಗೆಯಬೇಕು, ರನ್​ ತಡೆ ಹಿಡಿಯಬೇಕು ಎಂದು ಏಕೆ ತಂಡ ನಿರೀಕ್ಷಿಸುತ್ತಿದೆ ಅನ್ನೋದೇ ತಿಳಿಯುತ್ತಿಲ್ಲ. ಇನ್ನಷ್ಟು ಅನುಭವಿ ಬೌಲರ್​ಗಳು ಕಣಕ್ಕಿಳಿಯಬೇಕು. ಸ್ಪಿನ್ ವಿಭಾಗದಲ್ಲಿ ಕುಲ್​ದೀಪ್ ಯಾದವ್​ ತಂಡ ಸೇರಿದರೆ ಉತ್ತಮ. ಇದು ಬೌಲಿಂಗ್ ದಾಳಿಗೆ ಉತ್ತಮ ಅಸ್ತ್ರವಾಗಲಿದೆ" ಎಂದು ಅಜ್ರುದ್ದೀನ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net