

Ravichandran Ashwin : ದುಬೈನಲ್ಲಿ ಇಂದು (ಮಾ.04) ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಈ ಸೆಮಿಫೈನಲ್ ಹಣಾಹಣಿಗೆ ಎರಡೂ ತಂಡಗಳು ತಮ್ಮ ತಂತ್ರಗಳನ್ನು ಸಿದ್ಧಪಡಿಸಿಕೊಂಡಿವೆ. ಈ ಪಂದ್ಯವನ್ನು ಗೆದ್ದು ಫೈನಲ್‌ಗೆ ಅರ್ಹತೆ ಪಡೆಯುವ ಬಯಕೆಯನ್ನು ಎರಡೂ ತಂಡಗಳು ಹೊಂದಿವೆ. ಈ ಸಂದರ್ಭದಲ್ಲಿ, ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಭಾರತೀಯ ನಾಯಕ ರೋಹಿತ್ ಶರ್ಮ ಅವರಿಗೆ ಪ್ರಮುಖ ಸಲಹೆಯನ್ನು ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಬೇಕೆಂದು ಅಶ್ವಿನ್ ಸಲಹೆ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಅದ್ಭುತ ಪ್ರದರ್ಶನ ನೀಡಿದರು. ಅವರು ತಮ್ಮ ಸ್ಪಿನ್ ಮ್ಯಾಜಿಕ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಭಯಭೀತಗೊಳಿಸಿದರು. ತಮ್ಮ ವೃತ್ತಿಜೀವನದ ಎರಡನೇ ಏಕದಿನ ಪಂದ್ಯವನ್ನು ಆಡಿದ ವರುಣ್ 5 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.
ಟ್ರಾವಿಸ್ ಹೆಡ್ ಅವರನ್ನು ತಡೆದು ನಿಲ್ಲಿಸಲು ನೀವು ಪವರ್‌ಪ್ಲೇನಲ್ಲಿ ವರುಣ್ ಚಕ್ರವರ್ತಿಯನ್ನು ಬೌಲಿಂಗ್ ಇಳಿಸಬೇಕಿದೆ. ವರುಣ್‌ಗೆ ಸ್ಟಂಪ್‌ಗಳ ಕಡೆಗೆ ಬೌಲಿಂಗ್ ಮಾಡಲು ಹೇಳಿ. ಈ ವೇಳೆ ಹೆಡ್ ಸ್ಟಂಪ್‌ಗಳನ್ನು ಬಿಟ್ಟು ಶಾಟ್ ಆಡಲು ಪ್ರಯತ್ನಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ, ಚೆಂಡು ತಪ್ಪಿ ಸ್ಟಂಪ್ ಆಗುವ ಸಾಧ್ಯತೆಯಿದೆ ಇದೆ ಎಂದು ಅಶ್ವಿನ್ ಹೇಳಿದ್ದಾರೆ.
ಅಲ್ಲದೆ, ಬೌಲಿಂಗ್‌ಗೆ ಸರಿಹೊಂದುವಂತೆ ಮೈದಾನವನ್ನು ಹೊಂದಿಸಿದರೆ, ಹೆಡ್ ವಿಕೆಟ್ ಪಡೆಯುವ ಅವಕಾಶವಿದೆ. ವರುಣ್ ಚಕ್ರವರ್ತಿ ಹೊಸ ಚೆಂಡಿನೊಂದಿಗೆ ಭಾರತಕ್ಕೆ ಉತ್ತಮ ಆರಂಭವನ್ನು ನೀಡಬಹುದು. ವರುಣ್ ಬೌಲಿಂಗ್‌ನಲ್ಲಿ ಶಾಟ್‌ಗಳನ್ನು ಆಡುವುದು ಸುಲಭವಲ್ಲ. ಆದ್ದರಿಂದ, ವರುಣ್ ಬೌಲಿಂಗ್‌ನಲ್ಲಿ ಹೆಡ್ ಔಟ್ ಆಗುವ ಸಾಧ್ಯತೆಯಿದೆ ಎಂದು ಅಶ್ವನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಅಂದಹಾಗೆ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದರೂ, ಭದ್ರತಾ ಕಾರಣಗಳಿಂದಾಗಿ ಟೀಮ್ ಇಂಡಿಯಾ ಅಲ್ಲಿಗೆ ಹೋಗಿಲ್ಲ. ಹೀಗಾಗಿ ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳವಾದ ದುಬೈನಲ್ಲಿ ಆಡುತ್ತಿದೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಬುಧವಾರ ಎರಡನೇ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗಲಿವೆ. ಈ ಪಂದ್ಯ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. (ಏಜೆನ್ಸೀಸ್)