1974ರ ಚೊಚ್ಚಲ ರಣಜಿ ಟ್ರೋಫಿ ಜಯ ನಮಗೂ ಸ್ಫೂರ್ತಿ ತುಂಬಿತ್ತು; ಹಳೆಯ ದಿನಗಳನ್ನು ನೆನಪಿಸಿಕೊಂಡ ದ್ರಾವಿಡ್​

web dravid web
Published on

ಬೆಂಗಳೂರು: ಕರ್ನಾಟಕ ತಂಡ 1974ರಲ್ಲಿ ಸಾಧಿಸಿದ ಚೊಚ್ಚಲ ರಣಜಿ ಟ್ರೋಫಿ ಗೆಲುವು ನಮಗೆಲ್ಲರಿಗೂ ಸ್ಫೂರ್ತಿ ತುಂಬಿತ್ತು. 15, 17 ವಯೋಮಿತಿ ಕ್ರಿಕೆಟ್​ನಲ್ಲಿ ಆಡುವಾಗ, ಕರ್ನಾಟಕ ತಂಡ ಸೆಮಿಫೈನಲ್​ನಲ್ಲಿ ಹೇಗೆ ಬಲಿಷ್ಠ ಬಾಂಬೆ (ಈಗಿನ ಮುಂಬೈ) ತಂಡವನ್ನು ಹಿಮ್ಮೆಟ್ಟಿಸಿತ್ತು ಎಂಬುದನ್ನು ಹಿರಿಯರು ಹೇಳಿದ್ದನ್ನು ಕೇಳಿದ್ದೆವು. ಅದು ಕರ್ನಾಟಕ ಕ್ರಿಕೆಟ್​ ಮಾತ್ರವಲ್ಲ, ದೇಶದ ಇತರ ತಂಡಗಳಿಗೂ ಮುಂಬೈಯನ್ನು ಮಣಿಸಬಹುದು ಎಂಬ ವಿಶ್ವಾಸ ತುಂಬಿತ್ತು ಎಂದು ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದರು.

ಇಎಎಸ್​ ಪ್ರಸನ್ನ ಸಾರಥ್ಯದಲ್ಲಿ ಜಿಆರ್​ ವಿಶ್ವನಾಥ್​, ಬ್ರಿಜೇಶ್​ ಪಟೇಲ್​, ಸಯ್ಯದ್​ ಕಿರ್ಮಾನಿ, ಬಿಎಸ್​ ಚಂದ್ರಶೇಖರ್​ ಒಳಗೊಂಡ ಕರ್ನಾಟಕ ತಂಡದ ಚೊಚ್ಚಲ ರಣಜಿ ಗೆಲುವಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ದ್ರಾವಿಡ್​ ಮಾತನಾಡಿದರು. 15 ವರ್ಷಗಳಲ್ಲಿ ಮೊದಲ ಬಾರಿ ಮುಂಬೈ ತಂಡ ಫೈನಲ್​ಗೇರುವುದನ್ನು ತಡೆದಿದ್ದ ಕರ್ನಾಟಕ ತಂಡ ಪ್ರಶಸ್ತಿ ಸುತ್ತಿನಲ್ಲಿ ರಾಜಸ್ಥಾನವನ್ನು 185 ರನ್​ಗಳಿಂದ ಮಣಿಸಿತ್ತು. ನಾಯಕ ಪ್ರಸನ್ನ 9 ವಿಕೆಟ್​ ಕಬಳಿಸಿ ಗೆಲುವಿನ ರೂವಾರಿಯಾಗಿದ್ದರು. ಸೆಮೀಸ್​ನಲ್ಲಿ ಜಿಆರ್​ವಿ ಮತ್ತು ಬ್ರಿಜೇಶ್​ ಪಟೇಲ್​ ಶತಕ ಸಿಡಿಸಿದ್ದರೆ, ಪ್ರಸನ್ನ-ಚಂದ್ರಶೇಖರ್​ 9 ವಿಕೆಟ್​ ಹಂಚಿಕೊಂಡು ಮುಂಬೈ ಎದುರು ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ಡ್ರಾ ಸಾಧಿಸಲು ನೆರವಾಗಿದ್ದರು.

"ಕರ್ನಾಟಕ ತಂಡ ಮೊದಲಿನಿಂದಲೂ ಉತ್ತಮ ಬೌಲರ್​ಗಳನ್ನು ಒಳಗೊಂಡಿತ್ತು. ಜಿಆರ್​ವಿ, ಸುಧಾಕರ್​ ರಾವ್​, ವಿಜಯಕೃಷ್ಣ, ಎವಿ ಜಯಪ್ರಕಾಶ್​, ಸಂಜಯ್​ ದೇಸಾಯಿ, ಕಿರ್ಮಾನಿ ಬಂದ ಬಳಿಕ ಬ್ಯಾಟಿಂಗ್​ ವಿಭಾಗವೂ ಬಲಿಷ್ಠವಾಗಿತ್ತು. ಅದಕ್ಕೆ ಹಿಂದಿನ ವರ್ಷ (1973) ಇರಾನಿ ಕಪ್​ನಲ್ಲಿ ಮುಂಬೈ ತಂಡವನ್ನು ಶೇಷಭಾರತ ಮಣಿಸಿದ್ದು ಕೂಡ ನಮಗೆ ಆತ್ಮವಿಶ್ವಾಸ ತುಂಬಿತ್ತು' ಎಂದು ಬ್ರಿಜೇಶ್​ ಪಟೇಲ್​ ಹೇಳಿದರು.

ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​, ಕರ್ನಾಟಕದ ಮಾಜಿ ಆಟಗಾರರಾದ ವೆಂಕಟೇಶ್​ ಪ್ರಸಾದ್​, ದೊಡ್ಡ ಗಣೇಶ್​ ಮತ್ತು ಸುಜಿತ್​ ಸೋಮಸುಂದರ್​ ಸಮಾರಂಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net