

ನವದೆಹಲಿ: ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ಬಳಿಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ತಮಗೆ ಬೇಕಾದ ಸಹಾಯಕ ಸಿಬ್ಬಂದಿ ಬೇಕೆಂದು ಹಠ ಹಿಡಿದಿದ್ದ ಗಂಭೀರ್ ಆ ಬಳಿಕ ಆಟಗಾರರಿಗೆ ಟಾಸ್ಕ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ನೇಮಿಸದ ಕುರಿತು ಮಾಜಿ ಕ್ರಿಕೆಟಿಗರೊಬ್ಬರು ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿದ್ದು, ಬಿಸಿಸಿಐ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಆಶಿಶ್ ನೆಹ್ರಾ, ಹಾರ್ದಿಕ್ನನ್ನು ನಾಯಕನನ್ನಾಗಿ ನೇಮಿಸಿದ ವಿಚಾರ ನನಗೇನೂ ಆಶ್ಚರ್ಯವನ್ನುಂಟು ಮಾಡಿಲ್ಲ. ಕ್ರೀಡೆ ವಿಚಾರಕ್ಕೆ ಬಂದರೆ ಈ ರೀತಿ ನಡೆಯುತ್ತಲೇ ಇರುತ್ತವೆ. ಹೊಸ ಕೋಚ್ ಬಂದಾಗ ಈ ರೀತಿ ಆಗುವುದು ಸಹಜ. ಕೋಚ್ ಹಾಗೂ ನಾಯಕನ ಆಲೋಚನೆಗಳಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಆದರೆ, ಆತನ (ಗಂಭೀರ್) ಆಲೋಚನೆಗಳು ಬೇರೆ ದಿಕ್ಕಿನಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಹಾರ್ದಿಕ್ನನ್ನು ನಾಯಕನನ್ನಾಗಿ ನೇಮಿಸದ ಬಗ್ಗೆ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ವೈಟ್-ಬಾಲ್ ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ಗೆ ಬಹಳ ಮುಖ್ಯವಾದ ಆಟಗಾರ ಎಂಬುದನ್ನು ಇವರು ಮರೆತಿರುವಂತೆ ಕಾಣುತ್ತಿದೆ. ಆದರೆ, ಶುಭಮನ್ ಗಿಲ್ರನ್ನು ಮೂರು ಸ್ವರೂಪಗಳಿಗೆ ಉಪನಾಯಕನನ್ನಾಗಿ ನೇಮಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಭವಿಷ್ಯದ ದೃಷ್ಠಿಯಿಂದ ಈ ನಿರ್ಧಾರ ಒಳ್ಳೆಯದಾಗಿದೆ.
ಆತನಿಗೆ ಕಲಿಯುವ ಹುಮ್ಮಸಿದ್ದು, ಆತ ಯಾವುದಕ್ಕೂ ಯೋಚಿಸುವುದಿಲ್ಲ. ಮುಂದಿನ ದಿನಗಳಲ್ಲಿ ಆತನಿಗೆ ಹೆಚ್ಚಿನ ಹೊಣೆ ಸಿಗುವ ನಿರೀಕ್ಷೆಯಿದೆ. ಆದರೆ, ಆತನ (ಗಂಭೀರ್) ಐಡಿಯಾ ಏನಿದೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡುವ ಎಂದು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.