ಈ ವಿಷಯದಲ್ಲಿ ನಾನು ಕೊಹ್ಲಿ ಪರ ನಿಲ್ಲುವೆ ಎಂದ ಗಂಭೀರ್!

gambhir web
Published on

ನವದೆಹಲಿ: ಟೀಮ್ ಇಂಡಿಯಾ ಮಾಜಿ ಆರಂಭಿಕ ಗೌತಮ್ ಗಂಭೀರ್ ಐಪಿಎಲ್ ಟೂರ್ನಿಯುದ್ದಕ್ಕೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರನ್ನು ದೂರುತ್ತ ಬಂದಿದ್ದರು. ಅಲ್ಲದೆ ಟಿ20 ಕ್ರಿಕೆಟ್ ಪ್ರಕಾರದಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅವರಿಗಿಂತ ರೋಹಿತ್ ಶರ್ಮ ಉತ್ತಮ ನಾಯಕರಾಗಬಲ್ಲರು ಎಂದಿದ್ದರು. ಆದರೆ ಇವೆಲ್ಲದರ ಬಳಿಕ ಇದೀಗ ಗಂಭೀರ್ ಅವರು ಒಂದು ವಿಷಯದಲ್ಲಿ ಮಾತ್ರ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ. ಅದೇನೆಂದು ಗೊತ್ತೇ?

ರೋಹಿತ್ ಶರ್ಮ ಐಪಿಎಲ್‌ನಲ್ಲಿ ಆಡಿದರೂ, ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದ ಜತೆಗೆ ತೆರಳದ ಕಾರಣದಿಂದಾಗಿ ಅವರ ಫಿಟ್ನೆಸ್ ಬಗ್ಗೆ ಗೊಂದಲ ಉಂಟಾಗಿತ್ತು ಎಂದು ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯಕ್ಕೆ ಮುನ್ನ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಹ್ಲಿ ಅವರ ಈ ಮಾತು ಸರಿಯಾಗಿಯೇ ಇದೆ ಎಂದು ಗಂಭೀರ್ ಅವರು ಈಗ ಟೀಮ್ ಇಂಡಿಯಾ ನಾಯಕನ ಪರ ನಿಂತಿದ್ದಾರೆ.

ತಂಡದ ಆಟಗಾರರ ಫಿಟ್ನೆಸ್ ಬಗ್ಗೆ ನಾಯಕನಿಗೆ ಬಿಸಿಸಿಐ ಸರಿಯಾದ ಮಾಹಿತಿಯನ್ನು ನೀಡಬೇಕಾಗಿತ್ತು ಎಂದಿರುವ ಗಂಭೀರ್, ‘ಈ ವಿಷಯದಲ್ಲಿ ನಾನು ವಿರಾಟ್ ಕೊಹ್ಲಿ ಪರವಾಗಿ ನಿಲ್ಲುತ್ತೇನೆ. ಯಾಕೆಂದರೆ ಅವರು ತಂಡದ ನಾಯಕ. ಮೈದಾನದಲ್ಲಿ ತಂಡವನ್ನು ಮುನ್ನಡೆಸುವವರು ಅವರು. ತಂಡದ ನಿರ್ವಹಣೆಗೆ ಟೀಕೆಗಳನ್ನು ಎದುರಿಸುವವರೂ ಅವರೇ. ಹೀಗಾಗಿ ತಂಡದ ಆಟಗಾರರ ವಿಷಯದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯನ್ನು ಅವರಿಗೆ ಒದಗಿಸಬೇಕು’ ಎಂದು ಗಂಭೀರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net