

Game Changers: ಎರಡು ದಿನಗಳ ಕಾಲ (ನ.24,25) ನಡೆದ ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರರ ಜತೆ ಯುವ ಕ್ರಿಕೆಟಿಗರನ್ನು ಖರೀದಿ ಮಾಡಿದ 10 ಫ್ರಾಂಚೈಸಿಗಳು, ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್ನಲ್ಲಿ ಪೈಪೋಟಿ ಕೊಟ್ಟು ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಕರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಕ್ರಿಕೆಟ್ ಪ್ರಿಯರಿಗೆಲ್ಲ ಗೊತ್ತಿರುವ ಸಂಗತಿ. ಸದ್ಯ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, 2025ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಪಂದ್ಯಗಳತ್ತ ಎಲ್ಲರ ಚಿತ್ತ ಮೂಡಿದೆ. ಇನ್ನು 10 ತಂಡಗಳ ಪೈಕಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ (Game Changers) ವಿಶೇಷವಾಗಿ ಕಂಡಿದ್ದು, ನಿರೀಕ್ಷಿಸಿದ ಆಟಗಾರರೇ ತಮ್ಮ ತಂಡದಲ್ಲಿರುವುದು ಫ್ರಾಂಚೈಸಿ ಅಭಿಮಾನಿಗಳ ಕೌತುಕವನ್ನು ದುಪ್ಪಟ್ಟಾಗಿಸಿದೆ.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಇತರೆ ಫ್ರಾಂಚೈಸಿಗಳಿಗೆ ಸೆಡ್ಡು ಹೊಡೆದ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ ನೈಟ್ ರೈಡರ್ಸ್ಗೆ ಬೇಡವಾದ ಆಟಗಾರರನ್ನೇ ತನ್ನ ತಂಡಕ್ಕೆ ಕರೆದುಕೊಂಡಿದೆ. ಸ್ಟಾರ್ ಬ್ಯಾಟರ್ ಆಗಿರುವ ಕೆ.ಎಲ್. ರಾಹುಲ್ರನ್ನು ಖರೀದಿಸಿದ ಡಿಸಿಗೆ, ತಂಡದ ಪರ ಉತ್ತಮ ಓಪನರ್ ಮತ್ತು ಕ್ಯಾಪ್ಟನ್ಸಿ ನಿಭಾಯಿಸುವ ಆಟಗಾರನೇ ಸಿಕ್ಕಿರುವುದು ಖುಷಿ ನೀಡಿದೆ. ಆದರೆ, ನಾಯಕತ್ವ ರಾಹುಲ್ಗೆ ಹಸ್ತಾಂತರಿಸುವುದು, ಬಿಡುವುದು ತಂಡಕ್ಕೆ ಬಿಟ್ಟದ್ದು. ಇನ್ನು ರಾಹುಲ್ ಜತೆಗೆ ಇಬ್ಬರು ವೇಗಿಗಳ ಎಂಟ್ರಿ ಟೀಮ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದೇ ನಿರೀಕ್ಷಿಸಲಾಗಿದೆ.
ಕಳೆದ ಬಾರಿ ಕೆಕೆಆರ್ ಟ್ರೋಫಿ ಗೆಲುವಿನ ಭಾಗವಾಗಿದ್ದ ಮಿಚೆಲ್ ಸ್ಟಾರ್ಕ್, ಆಸ್ಟ್ರೇಲಿಯಾ ತಂಡಕ್ಕೆ ಅದೃಷ್ಟದ ಬೌಲರ್. ಯಾರ್ಕರ್, ಸ್ವಿಂಗ್ ಬೌಲಿಂಗ್ಗೆ ನಿಸ್ಸೀಮರಾದ ಸ್ಟಾರ್ಕ್, ಕಡೆಯ ಓವರ್ಗಳಲ್ಲಿ ಟೀಮ್ಗೆ ಆಸರೆಯಾಗುವಂತ ಅತ್ಯುತ್ತಮ ವೇಗಿ ಎಂಬುದು ಕ್ರಿಕೆಟ್ ಲೋಕಕ್ಕೆ ಗೊತ್ತಿರುವ ಸಂಗತಿ. ಈ ವಿಷಯವೇ ಡೆಲ್ಲಿಗೂ ಪ್ಲಸ್ ಆಗಲಿದ್ದು, ತಂಡಕ್ಕೆ ಮಿಚೆಲ್ ಗೇಮ್ ಚೇಂಜರ್ ಆಗಿ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ ಎಂದು ಕ್ರಿಕೆಟ್ ವರದಿ ಉಲ್ಲೇಖಿಸಿದೆ.
ಒಂದಷ್ಟು ವರ್ಷ ಕಾವ್ಯ ಮಾರನ್ ಮಾಲೀಕತ್ವದ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಭಾರತೀಯ ವೇಗಿ ಟಿ. ನಟರಾಜನ್, ಎದುರಾಳಿಗಳ ವಿಕೆಟ್ ಕಬಳಿಸುವಲ್ಲಿ ಉತ್ತಮ ಬೌಲಿಂಗ್ ಹೊಂದಿದ್ದಾರೆ. ಈ ಬಾರಿ ನಟರಾಜನ್ ಅವರನ್ನು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್, ಟೀಮ್ ಇಂಡಿಯಾ ವೇಗಿ ತಮಗೆ ಅದೃಷ್ಟ ತಂದುಕೊಡಲಿದ್ದಾರೆ ಎಂದೇ ನಿರೀಕ್ಷಿಸಿದೆ. ಇವರ ಬೌಲಿಂಗ್ ಹೇಗೆ ಪ್ರಭಾವ ಬೀರಲಿದೆ? ಗೇಮ್ ಚೇಂಜರ್ ಆಗಲಿದ್ದಾರಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).