ಗೌತಿ ಬತ್ತಳಿಕೆಯಿಂದ ಹೊಸ ಬೌಲಿಂಗ್​ ಅಸ್ತ್ರ! ಡೇಲ್ ಸ್ಟೇನ್ ರೀತಿ ತಯಾರಿ, ಯಾರು ಗೊತ್ತಾ ಆ ಬೌಲರ್​?

Gautam Gambhir
Published on

ನವದೆಹಲಿ: ಎಲ್ಲರ ನಿರೀಕ್ಷೆಯಂತೆ ದಿಗ್ಗಜ ಕ್ರಿಕೆಟಿಗ ಗೌತಮ್ ಗಂಭೀರ್, ಟೀಮ್​ ಇಂಡಿಯಾ ಮುಖ್ಯ ಕೋಚ್​ ಹುದ್ದೆಯನ್ನು ಅಲಂಕರಿಸಿದ್ದಾರೆ. ಗೌತಿ ಕೋಚ್ ಆಗಿ ಬಂದ ನಂತರ ಟೀಮ್​ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಲಿವೆ ಎಂದು ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಭಾರತದ ತಂಡಗಳಲ್ಲಿ ಬದಲಾವಣೆ ಗುರುತು ಎದ್ದುಕಾಣುತ್ತಿವೆ.

ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್​ಗೆ ಟಿ20 ತಂಡದ ನಾಯಕತ್ವ ನೀಡಿ, ಶುಭಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಏಕದಿನ ಪಂದ್ಯದಲ್ಲಿಯು ಗಿಲ್​ಗೆ ಉಪನಾಯಕತ್ವ ನೀಡಲಾಗಿದೆ. ಇದೆಲ್ಲದರ ಹಿಂದೆ ಗಂಭೀರ್​ ಕೈವಾಡವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇವರೊಂದಿಗೆ ಪೇಸ್ ಬೌಲಿಂಗ್​ನಲ್ಲಿ ಟೀಮ್​ ಇಂಡಿಯಾವನ್ನು ಬಲಿಷ್ಠಗೊಳಿಸಲು ಗಂಭೀರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಭಾರತ ತಂಡಕ್ಕೆ ಡೇಲ್ ಸ್ಟೇನ್ ತರಹದ ಆಟಗಾರನನ್ನು ಒದಗಿಸುವ ಉದ್ದೇಶದಿಂದ ಗೌತಿ ಸೂಪರ್ ಬೌಲರ್ ಅನ್ನು ಆಯ್ಕೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಭಾರತೀಯ ಆಯ್ಕೆಗಾರರು ವಿಶ್ರಾಂತಿ ನೀಡಿದ್ದಾರೆ. ಆದರೆ, ಗಂಭೀರ್ ಅವರ ಸಲಹೆಯಂತೆ ಯುವ ಬೌಲರ್‌ನನ್ನು ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ. ಆ ಬೌಲರ್​ ಬೇರೆ ಯಾರು ಅಲ್ಲ, ಐಪಿಎಲ್​ 17ನೇ ಆವೃತ್ತಿ ಗೆದ್ದ ಕೋಲ್ಕತ್ತ ನೈಟ್​ ರೈಡರ್ಸ್ (ಕೆಕೆಆರ್​)​ ತಂಡದ ವೇಗಿ ಹರ್ಷಿತ್ ರಾಣಾ. ಐಪಿಎಲ್​ನಲ್ಲಿ ತಮ್ಮ ಅತ್ಯುತ್ತಮ ವೇಗ ಮತ್ತು ನಿಖರವಾದ ಲೈನ್ ಮತ್ತು ಲೆಂಥ್​ ಮೂಲಕ ಪ್ರಾಬಲ್ಯ ಮೆರೆದ ಹರ್ಷಿತ್ ರಾಣಾ ಅವರು ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ20ಗೆ ಆಯ್ಕೆಯಾದರು. ಆದರೆ ಆಡಲು ಅವಕಾಶ ಸಿಗಲಿಲ್ಲ. ಆದರೆ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ತಂಡಕ್ಕೆ ಸೇರಿಸಿಕೊಂಡಂತಿದೆ.

ಭಾರತ ತಂಡವು ವೇಗದ ಬೌಲಿಂಗ್‌ಗಾಗಿ ಬುಮ್ರಾ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಸಿರಾಜ್, ಅರ್ಷದೀಪ್ ಸಿಂಗ್ ಇದ್ದರೂ ರೆಗ್ಯುಲರ್ ಆಗಿ ಒಂದೇ ರೀತಿಯ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಮೊಹಮ್ಮದ್ ಶಮಿ ಅವರಿಗೆ ಗಾಯದ ಸಮಸ್ಯೆ ಶಾಪವಾಗಿ ಪರಿಣಮಿಸಿವೆ. ಆದ್ದರಿಂದಲೇ ಗಂಭೀರ್ ಪೇಸ್ ಬೌಲಿಂಗ್​ನತ್ತ ಗಮನ ಹರಿಸಿದಂತಿದೆ. ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಆಡುವಾಗ ಅತ್ಯುತ್ತಮ ಪ್ರದರ್ಶನ ತೋರಿರುವ ಹರ್ಷಿತ್ ರಾಣಾ ಮೇಲೆ ಹೆಚ್ಚಿನ ಗಮನ ಹರಿಸಿ, ಅವರನ್ನು ಟೀಮ್​ ಇಂಡಿಯಾಗೆ ಡೇಲ್ ಸ್ಟೇನ್ ರೀತಿಯ ಬೌಲರ್​ ಮಾಡುವ ಉದ್ದೇಶವನ್ನು ಮುಖ್ಯ ಕೋಚ್ ಗಂಭೀರ್ ಹೊಂದಿದ್ದಾರೆಂದು ತೋರುತ್ತದೆ. ಶ್ರೀಲಂಕಾ ವಿರುದ್ಧದ ಸರಣಿಗಾಗಿ ಹರ್ಷಿತ್​ ರಾಣಾಗೆ ಅವಕಾಶಗಳನ್ನು ನೀಡಲಾಗಿದೆ. ಅಲ್ಲದೆ, ಟೆಸ್ಟ್‌ನಲ್ಲಿಯೂ ಅವರ ಸೇವೆಯನ್ನು ಬಳಸಿಕೊಳ್ಳುವ ಭರವಸೆಯನ್ನು ಗಂಭೀರ್​ ಹೊಂದಿದ್ದಾರೆ.

ಐಪಿಎಲ್ 2024ರಲ್ಲಿ 13 ಪಂದ್ಯಗಳನ್ನಾಡಿರುವ ಹರ್ಷಿತ್ ರಾಣಾ 19 ವಿಕೆಟ್ ಪಡೆದು ಕೆಕೆಆರ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೇಲಾಗಿ, ಕೆಕೆಆರ್‌ನ ಮೆಂಟರ್​ ಆಗಿ ಕೆಲಸ ಮಾಡುವಾಗ, ಗಂಭೀರ್ ಅವರು ಹರ್ಷಿತ್​ ರಾಣಾ ಅವರ ಮೇಲೆ ಹೆಚ್ಚು ಗಮನ ಹರಿಸಿದ್ದರು. ಅವರನ್ನು ಅದ್ಭುತ ಬೌಲರ್ ಮಾಡಿ ಟೀಮ್​ ಇಂಡಿಯಾಗೆ ಉಡುಗೊರೆ ನೀಡಲು ಗೌತಿ ಸಂಕಲ್ಪ ಮಾಡಿದ್ದಾರೆ. ಗಂಭೀರ್ ಅಂದುಕೊಂಡಂತೆ ನಡೆದರೆ ಟೀಮ್​ ಇಂಡಿಯಾಗೆ ಡೇಲ್ ಸ್ಟೇನ್​ ಅವರಂತಹ ವೇಗದ ಬೌಲರ್ ಸಿಗಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net