

ಮುಂಬೈ: ಭಾರತ ತಂಡ ಸತತ 2 ಟೆಸ್ಟ್ ಸೋಲಿನೊಂದಿಗೆ ನ್ಯೂಜಿಲೆಂಡ್ ಎದುರಿನ ಸರಣಿ ಕಳೆದುಕೊಂಡ ಬೆನ್ನಲ್ಲೇ ಮುಖ್ಯ ಕೋಚ್ ಗೌತಮ್ ಗಂಭೀರ್ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 1ರಂದು ಆರಂಭಗೊಳ್ಳಲಿರುವ ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಅಕ್ಟೋಬರ್ 30 ಮತ್ತು 31 ರಂದು ನಡೆಯಲಿರುವ ನೆಟ್ಸ್ ಅಭ್ಯಾಸದಲ್ಲಿ ತಂಡದ ಎಲ್ಲ ಆಟಗಾರರು ಪಾಲ್ಗೊಳ್ಳುವುದು ಕಡ್ಡಾಯ ಎಂದು ಗಂಭೀರ್ ಸೂಚಿಸಿದ್ದಾರೆ. ಯಾವ ಆಟಗಾರರಿಗೂ ಅಭ್ಯಾಸದಿಂದ ವಿನಾಯಿತಿ ನೀಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಭಾರತ ತಂಡದಲ್ಲಿ ಈ ಮುನ್ನ ಟೆಸ್ಟ್ ಪಂದ್ಯಗಳಿಗೆ ಮುನ್ನಾದಿನದ ಅಭ್ಯಾಸಕ್ಕೆ ಹಾಜರಾಗುವುದು ಆಟಗಾರರಿಗೆ ಐಚ್ಛಿಕ ಆಯ್ಕೆ ಆಗಿತ್ತು. ಆದರೆ ಕಿವೀಸ್ ವಿರುದ್ಧದ ಆಘಾತಕಾರಿ ಸೋಲಿನ ಬಳಿಕ ತಂಡದ ಆಟಗಾರರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿರುವುದನ್ನು ಟೀಮ್ ಮ್ಯಾನೇಜ್ಮೆಂಟ್ ಮನಗಂಡಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಐಚ್ಛಿಕ ಅಭ್ಯಾಸವನ್ನು ವೇಗಿಗಳು ಮತ್ತು ತಂಡದ ಅಗ್ರ ಆಟಗಾರರು ತಪ್ಪಿಸಿಕೊಳ್ಳುತ್ತಾರೆ ಅಥವಾ ಲು ಅಭ್ಯಾಸವನ್ನಷ್ಟೇ ಮಾಡುತ್ತಾರೆ. ಕಾರ್ಯದೊತ್ತಡ ತಗ್ಗಿಸುವ ಸಲುವಾಗಿ ಆಟಗಾರರಿಗೆ ಈ ರೀತಿ ವಿರಾಮಕ್ಕೆ ಅವಕಾಶ ಕಲ್ಪಿಸಲಾಗುತಿತ್ತು.
ಆದರೆ ಈಗ ಭಾರತ ತವರಿನಲ್ಲೇ ವೈಟ್ವಾಷ್ ಮುಖಭಂಗ ಎದುರಾಗುವುದನ್ನು ತಪ್ಪಿಸಲು ಮುಂಬೈನಲ್ಲಿ ಸುಧಾರಿತ ನಿರ್ವಹಣೆ ತೋರಬೇಕಾಗಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ಬಾರಿ ಫೈನಲ್ಗೇರುವ ಆಸೆಯನ್ನು ಜೀವಂತವಿರಿಸಲು ಭಾರತಕ್ಕೆ ಗೆಲುವಿನ ಅನಿವಾರ್ಯತೆ ಇದೆ.
ಪುಣೆ ಟೆಸ್ಟ್ ಮುಗಿದ ಬೆನ್ನಲ್ಲೇ ಶನಿವಾರವೇ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮುಂಬೈಗೆ ಪ್ರಯಾಣಿಸಿದ್ದು, 2 ದಿನಗಳ ಕಾಲ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ಭಾರತ ತಂಡದ ಇತರ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಭಾನುವಾರ ಮುಂಬೈ ತಲುಪಿದ್ದು, ಇನ್ನು 2 ದಿನಗಳ ವಿಶ್ರಾಂತಿಯ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.