

ಮುಂಬೈ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್ ಮತ್ತು ತಂಡದಲ್ಲಿನ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ಗೆ ತಿರುಗೇಟು ನೀಡಿರುವ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, "ಭಾರತೀಯ ಕ್ರಿಕೆಟ್ನಲ್ಲಿ ಪಾಂಟಿಂಗ್ಗೆ ಏನು ಕೆಲಸ? ಅವರು ಆಸೀಸ್ ಕ್ರಿಕೆಟ್ನತ್ತ ಗಮನಹರಿಸಲಿ' ಎಂದರು. 36 ವರ್ಷದ ಕೊಹ್ಲಿ ಕಳೆದ 6 ಟೆಸ್ಟ್ಗಳಲ್ಲಿ ಕೇವಲ 22.72ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 2019ರ ನಂತರದಲ್ಲಿ ಕೊಹ್ಲಿ ಟೆಸ್ಟ್ನಲ್ಲಿ ಕೇವಲ 2 ಶತಕ ಸಿಡಿಸಿದ್ದಾರೆ.
ರೋಹಿತ್, ಕೊಹ್ಲಿ ಇನ್ನೂ ತುಡಿತವನ್ನು ಹೊಂದಿದ್ದಾರೆ
ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕಳೆದ ಕಿವೀಸ್ ವಿರುದ್ಧದ ಸರಣಿಯಲ್ಲಿ ಕ್ರಮವಾಗಿ 91 ಮತ್ತು 93 ರನ್ ಮಾತ್ರ ಗಳಿಸಿದ್ದರು. ಆದರೆ ಅವರಿಬ್ಬರ ಫಾರ್ಮ್ ಬಗ್ಗೆ ಯಾವುದೇ ಕಳವಳ ಹೊಂದಿಲ್ಲ. ಅವರಿಬ್ಬರು ಭಾರತೀಯ ಕ್ರಿಕೆಟ್ನಲ್ಲಿ ಸಾಕಷ್ಟು ಸಾಧನೆಗಳನ್ನು ತೋರಿದ್ದಾರೆ. ಮುಂದೆಯೂ ಸಾಧನೆಗಳನ್ನು ಮುಂದುವರಿಸಲಿದ್ದಾರೆ. ಅವರಿಬ್ಬರೂ ಈಗಲೂ ಕಠಿಣ ಪರಿಶ್ರಮ ಪಡುತ್ತಿದ್ದಾರೆ ಮತ್ತು ತುಡಿತವನ್ನು ಹೊಂದಿರುವುದೇ ನನಗೆ ಮುಖ್ಯವಾದುದು ಎಂದು ಗಂಭೀರ್ ಹೇಳಿದರು.
ನಿತೀಶ್ ಮೇಲೆ ಭರವಸೆ
ಭಾರತ ತಂಡ ಆಸೀಸ್ಗೆ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕರೆದೊಯ್ದಿದೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರು ಕೇವಲ 21ರ ರನ್ ಸರಾಸರಿ ಹೊಂದಿದ್ದಾರೆ. ಅನುಭವಿ ಶಾರ್ದೂಲ್ ಠಾಕೂರ್ರನ್ನು ಕಡೆಗಣಿಸಿ ನಿತೀಶ್ರನ್ನು ಆರಿಸಿದ ಬಗ್ಗೆ ಪ್ರಶ್ನೆಗಳು ಎದುರಾದಾಗ ಗಂಭೀರ್, "ದೇಶದಲ್ಲಿರುವ ಅತ್ಯುತ್ತಮ ಆಟಗಾರರನ್ನೇ ನಾವು ಆರಿಸಿದ್ದೇವೆ. ನಿತೀಶ್ ಪ್ರತಿಭಾನ್ವಿತರಾಗಿದ್ದಾರೆ. ಅವರು ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿದೆ' ಎಂದರು. ಈ ಮೂಲಕ ಶಾರ್ದೂಲ್ಗೆ ತಂಡಕ್ಕೆ ಮರಳುವ ಬಾಗಿಲು ಮುಚ್ಚಿದೆ ಎಂದು ಸ್ಪಷ್ಟಪಡಿಸಿದರು. ಶಾರ್ದೂಲ್ ಕಳೆದ ಆಸೀಸ್ ಪ್ರವಾಸದ ಗಾಬಾ ಟೆಸ್ಟ್ನಲ್ಲಿ ಅಮೂಲ್ಯ ವಿಕೆಟ್ ಮತ್ತು ಅರ್ಧಶತಕ ಗಳಿಸಿ ಮಿಂಚಿದ್ದರು.
ವೇಗಿಗಳ ಮೇಲೆ ವಿಶ್ವಾಸ
ಮೊಹಮದ್ ಶಮಿ ಗೈರಿನಲ್ಲಿ ಜಸ್ಪ್ರೀತ್ ಬುಮ್ರಾ ಆಸೀಸ್ನಲ್ಲಿ ಹೆಚ್ಚಿನ ಕಾರ್ಯದೊತ್ತಡ ಎದುರಿಸಲಿದ್ದಾರೆ ಎಂಬ ಅಭಿಪ್ರಾಯ ತಳ್ಳಿಹಾಕಿದ ಗಂಭೀರ್. ಅನನುಭವಿಗಳಾದ ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಉತ್ತಮ ನಿರ್ವಹಣೆ ತೋರುವ ವಿಶ್ವಾಸ ವ್ಯಕ್ತಪಡಿಸಿದರು. "ನಾವು ಗುಣಮಟ್ಟದ ವೇಗಿಗಳನ್ನು ಹೊಂದಿದ್ದು, ನಮ್ಮ ವೇಗದ ಬೌಲಿಂಗ್ ವಿಭಾಗ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದೆ' ಎಂದರು.