ಪರ್ತ್​ ಟೆಸ್ಟ್​ಗೆ ರೋಹಿತ್ ಗೈರಾದರೆ ನಾಯಕತ್ವ ವಹಿಸುವ ಆಟಗಾರನ ಹೆಸರು ಖಚಿತಪಡಿಸಿದ ಗಂಭೀರ್​

web gam2
Published on

ಮುಂಬೈ: ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಾಯಕ ರೋಹಿತ್​ ಶರ್ಮ ಆಸ್ಟ್ರೆಲಿಯಾ ಪ್ರವಾಸದ ಮೊದಲ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾದರೆ, ಉಪನಾಯಕ ಜಸ್​ಪ್ರೀತ್​ ಬುಮ್ರಾ ಅವರೇ ಸಾರಥ್ಯ ವಹಿಸಲಿದ್ದಾರೆ ಎಂದು ಟೀಮ್​ ಇಂಡಿಯಾದ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಕಾಂಗರೂ ನಾಡಿಗೆ ಪ್ರವಾಸ ಬೆಳೆಸುವ ಮುನ್ನ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು.

"ರೋಹಿತ್​ ಲಭ್ಯತೆಯ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಸರಣಿ ಆರಂಭಕ್ಕೆ ಮೊದಲಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ. ಬುಮ್ರಾ ಉಪನಾಯಕರಾಗಿರುವುದರಿಂದ, ರೋಹಿತ್​ ಅಲಭ್ಯರಾದರೆ ಅವರೇ ಪರ್ತ್​ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ' ಎಂದು ಗಂಭೀರ್​ ತಿಳಿಸಿದರು. ಮೊದಲ ಟೆಸ್ಟ್​ ಪಂದ್ಯ ಪರ್ತ್​ನಲ್ಲಿ ನವೆಂಬರ್​ 22ರಿಂದ ನಡೆಯಲಿದೆ.

ಪರ್ತ್​ನಲ್ಲಿ ರಾಹುಲ್​ ಆರಂಭಿಕ?

ರೋಹಿತ್​ ಶರ್ಮ ಮೊದಲ ಟೆಸ್ಟ್​ಗೆ ಗೈರಾದರೆ ಯಶಸ್ವಿ ಜೈಸ್ವಾಲ್​ ಜತೆಗೆ ಇನಿಂಗ್ಸ್​ ಆರಂಭಿಸಲು ಅಭಿಮನ್ಯು ಈಶ್ವರನ್​ ಮತ್ತು ಕೆಎಲ್​ ರಾಹುಲ್​ ರೇಸ್​ನಲ್ಲಿದ್ದಾರೆ. ಈ ಪೈಕಿ ಅನುಭವದ ಆಧಾರದಲ್ಲಿ ರಾಹುಲ್​ ಕಡೆಗೆ ಗಂಭೀರ್​ ಒಲವು ತೋರಿದರು. "ರಾಹುಲ್​ ಆರಂಭಿಕ, ವನ್​ಡೌನ್​ ಅಥವಾ 6ನೇ ಕ್ರಮಾಂಕದಲ್ಲೂ ಆಡಬಲ್ಲವರಾಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಕೀಪಿಂಗ್​ ನಿರ್ವಹಿಸಿದ್ದಾರೆ. ಬೇರೆ ಯಾವುದೇ ದೇಶ ಅವರಂಥ ವೈವಿಧ್ಯತೆಯ ಆಟಗಾರರನ್ನು ಹೊಂದಿಲ್ಲ' ಎಂದರು.

10 ದಿನಗಳ ತರಬೇತಿ

ಭಾರತ ತಂಡ ಮುಂದಿನ 10 ದಿನಗಳ ಕಾಲ ಆಸ್ಟ್ರೆಲಿಯಾ ನೆಲದಲ್ಲಿ ಅಭ್ಯಾಸ ನಡೆಸಲಿದೆ. "ಆಸ್ಟ್ರೆಲಿಯಾಕ್ಕೆ ಹಲವು ಬಾರಿ ಪ್ರವಾಸ ಕೈಗೊಂಡಿರುವ ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಅವರ ಅನುಭವ ಯುವ ಆಟಗಾರರಿಗೂ ನೆರವಾಗಲಿದೆ. ಮುಂದಿನ 10 ದಿನಗಳು ನಿರ್ಣಾಯಕ. ನವೆಂಬರ್​ 22ರ ಬೆಳಗ್ಗೆಯ ವೇಳೆಗೆ ನಾವು ಮೊದಲ ಎಸೆತದಿಂದಲೇ ಸಂಪೂರ್ಣ ಸಜ್ಜಾಗಿರಬೇಕು' ಎಂದು ಗಂಭೀರ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net