ಇಂದಿನಿಂದ ಫ್ರೆಂಚ್​ ಓಪನ್​ ಟೆನಿಸ್​; ರೋಲ್ಯಾಂಡ್​ ಗ್ಯಾರಸ್​ನಲ್ಲಿ ಕೊನೆಯ ಆಟಕ್ಕೆ ಸಜ್ಜಾದರೇ ರಾಫೆಲ್ ನಡಾಲ್​?

web nadal .
Published on

ಪ್ಯಾರಿಸ್​: ವರ್ಷದ ಎರಡನೇ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಫ್ರೆಂಚ್​ ಓಪನ್​ಗೆ ವೇದಿಕೆ ಸಜ್ಜಾಗಿದ್ದು, ಭಾನುವಾರದಿಂದ ರೋಲ್ಯಾಂಡ್​ ಗ್ಯಾರಸ್​ನ ಆವೆಮಣ್ಣಿನ ಅಂಕಣದಲ್ಲಿ ಅಗ್ರ ಆಟಗಾರರು ಹೋರಾಟ ನಡೆಸಲಿದ್ದಾರೆ. 14 ಬಾರಿಯ ಚಾಂಪಿಯನ್​ ರಾಫೆಲ್​ ನಡಾಲ್​ಗೆ ಇದು ಪ್ಯಾರಿಸ್​ನಲ್ಲಿ ಬಹುತೇಕ ಕೊನೇ ಟೂರ್ನಿ ಎನಿಸಿರುವ ಕಾರಣ ಕೇಂದ್ರಬಿಂದುವಾಗಿದ್ದಾರೆ. 24 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ ಸೆರ್ಬಿಯಾ ತಾರೆ ನೊವಾಕ್​ ಜೋಕೊವಿಕ್​ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದ್ದಾರೆ.

2005ರಲ್ಲಿ ಟೀನೇಜ್​ ಆಟಗಾರನಾಗಿ ರೋಲ್ಯಾಂಡ್​ ಗ್ಯಾರಸ್​ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದ್ದ ನಡಾಲ್​ ಹಾಲಿ ಟೂರ್ನಿಯ ನಡುವೆ 38ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಮಾಜಿ ವಿಶ್ವ ನಂ. 1 ನಡಾಲ್​ ಗಾಯದಿಂದಾಗಿ ಕಳೆದ ಕೆಲ ಸಮಯದಿಂದ ಅಂಗಣದಿಂದ ದೂರವಿದ್ದ ಕಾರಣ ವಿಶ್ವ ರ್ಯಾಂಕಿಂಗ್​ನಲ್ಲಿ ಅವರ ಸ್ಥಾನ ಈಗ 276ಕ್ಕೆ ಕುಸಿದಿದೆ. ಹಾಲಿ ವರ್ಷ 15 ಪಂದ್ಯಗಳನ್ನಷ್ಟೇ ಆಡಿರುವ ನಡಾಲ್​, ಸೋಮವಾರ ಮೊದಲ ಸುತ್ತಿನಲ್ಲಿ ವಿಶ್ವ ನಂ. 4 ಜರ್ಮನಿಯ ಅಲೆಕ್ಸಾಂಡರ್​ ಜ್ವೆರೇವ್​ ಸವಾಲು ಎದುರಿಸಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಡಾಲ್​, ಇದೇ ತನ್ನ ಕೊನೇ ಟೆನಿಸ್​ ಋತು ಎಂದು ಈಗಾಗಲೆ ಮುನ್ಸೂಚನೆ ನೀಡಿದ್ದಾರೆ.

37 ವರ್ಷದ ಜೋಕೊವಿಕ್​ ಕೂಡ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ನಿರೀಕ್ಷೆಯಲ್ಲಿದ್ದು, ಮೊದಲ ಸುತ್ತಿನಲ್ಲಿ ವೈಲ್ಡ್​ ಕಾರ್ಡ್​ ಆಟಗಾರನೆದುರು ಆಡುವ ಸುಲಭ ಸವಾಲು ಹೊಂದಿದ್ದಾರೆ. ವಿಶ್ವ ನಂ. 2 ಇಟಲಿಯ ಜೆನ್ನಿಕ್​ ಸಿನ್ನರ್​, ವಿಶ್ವ ನಂ. 3 ಸ್ಪೇನ್​ನ ಕಾಲೋರ್ಸ್​ ಅಲ್ಕರಾಜ್​, ನಾರ್ವೆಯ ಕ್ಯಾಸ್ಪರ್​ ರುಡ್​ ಇತರ ಪ್ರಮುಖ ಪ್ರಶಸ್ತಿ ಆಕಾಂಗಳಾಗಿದ್ದಾರೆ. ಬ್ರಿಟನ್​ ತಾರೆ ಆಂಡಿ ಮರ್ರೆಗೂ ಇದು ಪ್ಯಾರಿಸ್​ನಲ್ಲಿ ಕೊನೇ ಟೂರ್ನಿಯಾಗಿರಲಿದೆ.

ಸ್ವಿಯಾಟೆಕ್​ಗೆ ಸುಲಭ ಹಾದಿ...

ಫ್ರೆಂಚ್​ ಓಪನ್​ನಲ್ಲಿ ಕಳೆದ 4 ವರ್ಷಗಳಲ್ಲಿ 3 ಬಾರಿ ಪ್ರಶಸ್ತಿ ಗೆದ್ದಿರುವ ವಿಶ್ವ ನಂ. 1 ಪೋಲೆಂಡ್​ನ ಇಗಾ ಸ್ವಿಯಾಟೆಕ್​ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಈ ಸಲ ಸುಲಭ ಸವಾಲು ಹೊಂದಿದ್ದಾರೆ. ರೋಲ್ಯಾಂಡ್​ ಗ್ಯಾರಸ್​ನಲ್ಲಿ ಇದುವರೆಗೆ ಆಡಿರುವ 30 ಪಂದ್ಯಗಳಲ್ಲಿ 28ರಲ್ಲಿ ಜಯಿಸಿದ್ದು, ನಡಾಲ್​ರಂತೆ ಇಲ್ಲಿ ಪ್ರಾಬಲ್ಯ ಸಾಧಿಸುವ ತವಕದಲ್ಲಿದ್ದಾರೆ. ಇತ್ತೀಚೆಗೆ ಮ್ಯಾಡ್ರಿಡ್​, ರೋಮ್​ನಲ್ಲಿ ಪ್ರಶಸ್ತಿ ಗೆದ್ದು ಭರ್ಜರಿ ಲಯದಲ್ಲೂ ಇದ್ದಾರೆ. ಅವರಿಗೆ ಬೆಲಾರಸ್​ನ ಅರಿನ ಸಬಲೆಂಕಾ, ಅಮೆರಿಕದ ಕೋಕೋ ಗೌಫ್​ ಪ್ರಮುಖ ಸವಾಲೆನಿಸಿದ್ದಾರೆ.

ಒಟ್ಟು 482 ಕೋಟಿ ರೂ. ಬಹುಮಾನ

ಟೂರ್ನಿಯ ಒಟ್ಟು ಬಹುಮಾನ ಮೊತ್ತ 482 ಕೋಟಿ ರೂ. ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇ.7.8 ಅಧಿಕವಾಗಿದೆ. ಪುರುಷ&ಮಹಿಳಾ ಸಿಂಗಲ್ಸ್​ ವಿಭಾಗದ ವಿಜೇತರು ತಲಾ 21.62 ಕೋಟಿ ರೂ. ಗಳಿಸಲಿದ್ದಾರೆ. ರನ್ನರ್​ಅಪ್​ 10.81 ಕೋಟಿ ರೂ. ಪಡೆಯಲಿದ್ದಾರೆ. ವಿಜೇತ ಡಬಲ್ಸ್​ ಜೋಡಿ 5.31 ಕೋಟಿ ರೂ. ಗಳಿಸಲಿದೆ. ಸಿಂಗಲ್ಸ್​ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರೂ 36.94 ಲಕ್ಷ ರೂ. ಲಭಿಸಲಿದೆ.

ನಗಾಲ್​ಗೆ ಖಚನೋವ್​ ಎದುರಾಳಿ

ಭಾರತದ ಅಗ್ರ ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಫ್ರೆಂಚ್​ ಓಪನ್​ ಮೊದಲ ಸುತ್ತಿನಲ್ಲಿ ವಿಶ್ವ ನಂ. 18 ರಷ್ಯಾದ ಕರೆನ್​ ಖಚನೋವ್​ ವಿರುದ್ಧ ಸೆಣಸಲಿದ್ದಾರೆ. ವಿಶ್ವ ನಂ. 94 ನಗಾಲ್​, ಪ್ರಧಾನ ಸುತ್ತಿಗೆ ನೇರಪ್ರವೇಶ ಪಡೆದಿದ್ದಾರೆ. 2019ರ ನಂತರ ರೋಲ್ಯಾಂಡ್​ ಗ್ಯಾರಸ್​ನ ಸಿಂಗಲ್ಸ್​ ಪ್ರಧಾನ ಸುತ್ತಿನಲ್ಲಿ ಆಡುತ್ತಿರುವ ಮೊದಲ ಭಾರತೀಯರೆನಿಸಿದ್ದಾರೆ. 44 ವರ್ಷದ ರೋಹನ್​ ಬೋಪಣ್ಣ ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜತೆಗೂಡಿ ಡಬಲ್ಸ್​ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಒಲಿಂಪಿಕ್ಸ್​ ಅರ್ಹತೆಗೆ ಪ್ರಮುಖ

ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತಾ ಪಟ್ಟಿ ಜೂನ್​ 10ಕ್ಕೆ ಪ್ರಕಟಗೊಳ್ಳುವುದಕ್ಕೆ ಮುನ್ನ ಇದು ಕೊನೇ ಟೆನಿಸ್​ ಟೂರ್ನಿ ಎನಿಸಿದೆ. ಅಲ್ಲದೆ ಜುಲೈ 26ರಿಂದ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ಟೆನಿಸ್​ ಸ್ಪರ್ಧೆಗಳು ಇಲ್ಲೇ ನಡೆಯಲಿವೆ. ಹೀಗಾಗಿ ಒಲಿಂಪಿಕ್ಸ್​ ಸಿದ್ಧತೆಯ ದೃಷ್ಟಿಯಿಂದಲೂ ಇದು ಪ್ರಮುಖ ಟೂರ್ನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net