ಟಿ20 ಕ್ರಿಕೆಟ್ ನಮ್ಮನ್ನು ಹಾಳು ಮಾಡಿತು, ವಿಂಡೀಸ್​ ವೈಭವ ಮರೆಯದಿರಿ! ICC ನಿರ್ಧಾರಕ್ಕೆ ಕ್ಲೈವ್​ ಲಾಯ್ಡ್​ ಕಿಡಿ | Clive Lloyd

Clive Lloyd
Published on

Clive Lloyd : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರ ಭಾಗವಾಗಿ ಸಾಂಪ್ರದಾಯಿಕ ಸ್ವರೂಪವಾಗಿರುವ ಟೆಸ್ಟ್​ ಕ್ರಿಕೆಟ್​ ಅನ್ನು ಎರಡು ಹಂತಗಳಲ್ಲಿ (2-ಟೈರ್ ಟೆಸ್ಟ್ ಕ್ರಿಕೆಟ್) ಆಯೋಜಿಸಲು ಐಸಿಸಿ ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಈ ನಿಟ್ಟಿನಲ್ಲಿ ಅಗ್ರ ಶ್ರೇಣಿಯ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಹೆಚ್ಚಿನ ಸರಣಿಗಳನ್ನು ನಡೆಸಲು ಐಸಿಸಿ ಯೋಜಿಸುತ್ತಿದೆ. ಐಸಿಸಿ ಅಧ್ಯಕ್ಷ ಜಯ ಷಾ, ಬಿಸಿಸಿಐ ಪ್ರತಿನಿಧಿಗಳು, ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳು ಮತ್ತು ಇಸಿಬಿ ಮುಖ್ಯಸ್ಥರು ಇದೇ ವಿಷಯದ ಕುರಿತು ಈ ತಿಂಗಳ ಕೊನೆಯಲ್ಲಿ ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ ಎಂದು ಹಲವಾರು ವರದಿಗಳು ಸೂಚಿಸುತ್ತವೆ.

ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ಲೈವ್ ಲಾಯ್ಡ್, ಟೆಸ್ಟ್​ನಲ್ಲಿ ಎರಡು ಹಂತದ ವ್ಯವಸ್ಥೆಯ ಪ್ರಸ್ತಾಪದ ಬಗ್ಗೆ ಕೋಪಗೊಂಡಿದ್ದಾರೆ. ಐಸಿಸಿ ನಿಜವಾಗಿಯೂ ಟೆಸ್ಟ್‌ನಲ್ಲಿ 2 ಹಂತದ ವ್ಯವಸ್ಥೆಯನ್ನು ತರಲು ಯೋಚಿಸುತ್ತಿದ್ದರೆ, ಇದು ಖಂಡಿತವಾಗಿಯೂ ಭಯಾನಕ ನಿರ್ಧಾರವಾಗಿದೆ. ಟೆಸ್ಟ್ ಕ್ರಿಕೆಟ್ ಸ್ಥಾನಮಾನ ಪಡೆಯಲು ಹೆಣಗಾಡುತ್ತಿರುವ ಸಣ್ಣ ತಂಡಗಳಿಗೆ ಈ ನಿರ್ಧಾರ ಶಾಪವಾಗಿ ಪರಿಣಮಿಸುತ್ತದೆ ಎಂದರು.

ಐಸಿಸಿಯ ನಿರ್ಧಾರ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಯನ್ನು ಹೆಚ್ಚಿಸುವುದಿಲ್ಲ ಬದಲಿಗೆ, ಅದನ್ನು ಕಡಿಮೆ ಮಾಡುತ್ತದೆ. ಚಿಕ್ಕ ತಂಡಗಳನ್ನು ಅಗ್ರ ತಂಡಗಳೊಂದಿಗೆ ಹೆಚ್ಚು ಆಡುವಂತೆ ಮಾಡಲು ಐಸಿಸಿ ಗಮನಹರಿಸಬೇಕು. ಅದರ ಹೊರತಾಗಿ ಅದು ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕ್ಲೈವ್ ಲಾಯ್ಡ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಹಂತದಲ್ಲಿ ಆಡಲು ಐಸಿಸಿ ಯೋಜನೆಯನ್ನು ರೂಪಿಸುತ್ತಿದೆ ಎಂಬುದನ್ನು ನಾನು ನಂಬಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ತನ್ನ ಖ್ಯಾತಿಗೆ ಅನುಗುಣವಾಗಿ ಆಡುತ್ತಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಈಗ ವಿಂಡೀಸ್​ಗೆ ಅಗ್ರ ತಂಡಗಳೊಂದಿಗೆ ಆಡಲು ಅವಕಾಶ ಸಿಗದಿದ್ದರೆ, ನಮ್ಮ ಕ್ರಿಕೆಟಿಗರು ಹೇಗೆ ತಾನೇ ಕಲಿಯುತ್ತಾರೆ?

ನಾವು ಐಕಾನಿಕ್ ಟೀಮ್ ಎಂದು ಹೆಸರಾಗಿದ್ದೇವೆ ಮತ್ತು ಐಸಿಸಿ ಅದನ್ನು ಮರೆತಂತಿದೆ. 15 ವರ್ಷಗಳಲ್ಲಿ ಯಾವುದೇ ತಂಡವು ನಮ್ಮನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಈ ಅಂಶಗಳನ್ನು ಹೇಗೆ ಮರೆಯಬಹುದು? ಟಿ20 ಕ್ರಿಕೆಟ್ ನಮ್ಮ ಕ್ರಿಕೆಟ್ ಅನ್ನು ಹಾಳು ಮಾಡಿದೆ. ನಮಗೆ ಹಣ ಮತ್ತು ನೆರವಿನ ಅವಶ್ಯಕತೆ ಇದೆ ಎಂದು ಲಾಯ್ಡ್ ಹೇಳಿದರು.

ನಾವು ಐಸಿಸಿಯಿಂದ ಆರ್ಥಿಕ ಸಹಾಯವನ್ನು ಪಡೆದರೆ ನಾವು ಅದನ್ನು ಮರಳಿಸಬಹುದು. ನಮಗೆ ಹಣ ಸಹಾಯ ಬೇಕಿದೆ. ನಾವು 14 ದ್ವೀಪಗಳನ್ನು ಹೊಂದಿದ್ದೇವೆ. ಇಲ್ಲಿ ರೈಲು ಅಥವಾ ಬಸ್ ಮೂಲಕ ಪ್ರಯಾಣಿಸಲು ಸಾಧ್ಯವಿಲ್ಲ, ಆದ್ದರಿಂದ ನಾವು ವಿಮಾನದಲ್ಲೇ ಪ್ರಯಾಣ ಮಾಡಬೇಕು. ಆದರೆ, ಅದು ದುಬಾರಿಯಾಗಿದೆ. ಈ ಕಾರಣಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯ ದೇಶೀಯ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಹೋಟೆಲ್‌ಗಳು ಸಹ ದುಬಾರಿಯಾಗಿದೆ ಮತ್ತು ಐಸಿಸಿ ಅದನ್ನು ಅರಿತುಕೊಳ್ಳಬೇಕು. ಮೂರು ತಂಡಗಳು [ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್] ಐಸಿಸಿಯಿಂದ ಗರಿಷ್ಠ ಹಣವನ್ನು ಪಡೆಯಲು ನಿರ್ಧರಿಸಿವೆ ಮತ್ತು ನಾವು ಕಡಿಮೆ ಪಡೆಯುತ್ತೇವೆ. ಆದರೆ, ಇಂಗ್ಲಿಷ್ ಪ್ರೀಮಿಯರ್ ಲೀಗ್ [ಫುಟ್ಬಾಲ್] ನಲ್ಲಿ, ಆರ್ಸೆನಲ್ ಅಥವಾ ಚೆಲ್ಸಿಯಾ ಸಮಾನ ಪಾಲನ್ನು ಪಡೆಯುತ್ತವೆ. ನಾವು ಕುಳಿತು ಮಾತನಾಡಿದರೆ, ಈ ತಾರತಮ್ಮವನ್ನು ತಪ್ಪಿಸಬಹುದೆಂಬ ಖಾತ್ರಿ ನನಗಿದೆ. ನಾವು ಒಂದು ಕಾಲದಲ್ಲಿ ಉನ್ನತ ಸ್ಥಾನದಲ್ಲಿರುವಾಗ ನಮ್ಮನ್ನು ಎಲ್ಲರು ಬಳಸಿಕೊಂಡಿದ್ದಾರೆ. ನಾವೀಗ ಕೆಳಗಿದ್ದೇವೆ. ಹೀಗಾಗಿ ನಮಗೆ ಸಹಾಯ ಬೇಕಿದೆ. ದಯವಿಟ್ಟು ವೆಸ್ಟ್ ಇಂಡೀಸ್‌ನ ವೈಭವವನ್ನು ಮರೆಯಬೇಡಿ ಎಂದು ಲಾಯ್ಡ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net