

ನವದೆಹಲಿ: ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ದೆಹಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆ ಸಮಯದಲ್ಲಿ ಸಂಸದ ಶಶಿ ತರೂರ್ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ, ಎಂದು ಆರೋಪಿಸಿ ರಾಜೀವ್ ಚಂದ್ರಶೇಖರ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಲೋಕಸಭೆ ಚುನಾವಣೆ ಸಮಯದಲ್ಲಿ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಸಂಸದ ಶಶಿ ತರೂರ್ ಮಾತನಾಡುವ ವೇಳೆ, ರಾಜೀವ್ ಚಂದ್ರಶೇಖರ್ ಅವರು ಮತ ಪಡೆಯಲು ಜನರಿಗೆ ದುಡ್ಡು ಹಂಚುತ್ತಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನನ್ನ ತಮ್ಮ ಪ್ರತಿಷ್ಠೆಗೆ ಹಾನಿಯುಂಟು ಮಾಡಿದ್ದು, ಈ ಕಾರಣಕ್ಕಾಗಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿರುವುದಾಗಿ ಹೇಳಿದ್ದಾರೆ.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದ್ದು, ಉದ್ದೇಶಿತ ಆರೋಪಿ (ಶಶಿ ತರೂರ್) ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಕಾರಣ, ನ್ಯಾಯಾಲಯವು ಈ ವಿಷಯವನ್ನು ನಿಭಾಯಿಸುವ ಅಧಿಕಾರವನ್ನು ಹೊಂದಿಲ್ಲ. ಪರಿಣಾಮವಾಗಿ, ಮುಂದಿನ ಪ್ರಕ್ರಿಯೆಗಳಿಗೆ ಸೂಕ್ತವಾದ ನ್ಯಾಯವ್ಯಾಪ್ತಿಯೊಂದಿಗೆ ಪ್ರಕರಣವನ್ನು ನ್ಯಾಯಾಲಯಕ್ಕೆ ವರ್ಗಾಯಿಸಬೇಕಾಗುತ್ತದೆ ಎಂದು ಹೇಳಿದ ನ್ಯಾಯಾಧೀಶರು ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮೂಂದೂಡಿದ್ದಾರೆ.