

ನವದೆಹಲಿ: ಮಾಜಿ ದೇಶೀಯ ಕ್ರಿಕೆಟ್ ತಾರೆ ಹಾಗೂ ಮುಂಬೈ ಮಾಜಿ ನಾಯಕ ಅಮೋಲ್ ಮುಜುಮ್ದಾರ್ ಭಾರತದ ಮಹಿಳಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಬುಧವಾರ ಬಿಸಿಸಿಐನಿಂದ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಇದರಿಂದಾಗಿ ಭಾರತೀಯ ಕ್ರಿಕೆಟ್ನಲ್ಲಿ ಸುದೀರ್ ಸಮಯದಿಂದ ಖಾಲಿ ಉಳಿದಿದ್ದ ಹುದ್ದೆಯೊಂದು ಭರ್ತಿಗೊಂಡಂತಾಗಿದೆ.
ಸುಲಕ್ಷಣಾ ನಾಯ್ಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೆಲ ತಿಂಗಳ ಹಿಂದೆಯೇ 48 ವರ್ಷದ ಮುಜುಮ್ದಾರ್ ಹೆಸರನ್ನು ಅವಿರೋಧವಾಗಿ ಶಿಾರಸು ಮಾಡಿತ್ತು. ಆದರೂ ಅವರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಸಿಸಿಐ ಹೆಚ್ಚಿನ ಸಮಯ ತೆಗೆದುಕೊಂಡಿದೆ.
ರಮೇಶ್ ಪೊವಾರ್ 10 ತಿಂಗಳ ಹಿಂದೆಯೇ ಕೋಚ್ ಹುದ್ದೆಯಿಂದ ಬಿಡುಗಡೆಗೊಂಡು ಬೆಂಗಳೂರಿನ ಎನ್ಸಿಎಗೆ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಕಳುಹಿಸಲ್ಪಟ್ಟಿದ್ದರು. ನಂತರದಲ್ಲಿ ಮಾಜಿ ಬ್ಯಾಟರ್ ಹೃಷಿಕೇಶ್ ಕಾನಿಟ್ಕರ್ ಮಹಿಳಾ ತಂಡದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು 2025ರಲ್ಲಿ ಭಾರತದ ಆತಿಥ್ಯದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿ ಮುಜುಮ್ದಾರ್ ಮುಂದಿರುವ ಎರಡು ಪ್ರಮುಖ ಸವಾಲುಗಳಾಗಿವೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 171 ಪಂದ್ಯಗಳಲ್ಲಿ 30 ಶತಕಗಳ ಸಹಿತ 11 ಸಾವಿರಕ್ಕೂ ಅಧಿಕ ರನ್ ಬಾರಿಸಿರುವ ಮುಜುಮ್ದಾರ್, 100 ಲಿಸ್ಟ್ ಎ ಏಕದಿನ ಪಂದ್ಯಗಳಲ್ಲೂ ಆಡಿದ ಅನುಭವ ಹೊಂದಿದ್ದಾರೆ. 21 ವರ್ಷಗಳ ಕಾಲ ದೇಶೀಯ ಕ್ರಿಕೆಟ್ನಲ್ಲಿ ಆಡಿರುವ ಅವರು, ಮುಂಬೈ ಪರ ಹಲವು ಬಾರಿ ರಣಜಿ ಟ್ರೋಫಿ ಪ್ರಶಸ್ತಿ ಗೆಲುವು ಕಂಡಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ರ ಬಾಲ್ಯದ ಗುರು ರಮಾಕಾಂತ್ ಆಚ್ರೇಕರ್, ಮುಜುಮ್ದಾರ್ಗೂ ಕೋಚ್ ಆಗಿದ್ದರು. ಮುಜುಮ್ದಾರ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಭಾರತ ಪ್ರವಾಸದ ವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೂ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
*ಭಾರತೀಯ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ನನಗೆ ಗೌರವವೆನಿಸಿದೆ. ಸಿಎಸಿ ಮತ್ತು ಬಿಸಿಸಿಐ ನನ್ನ ಮೇಲೆ ನಂಬಿಕೆ ಇಟ್ಟಿದೆ ಮತ್ತು ಭಾರತ ತಂಡದ ಭವಿಷ್ಯದ ಬಗೆಗಿನ ನನ್ನ ರೂಪುರೇಷೆಗೂ ಮನ್ನಣೆ ನೀಡಿದಂತಾಗಿದೆ. ಇದೊಂದು ದೊಡ್ಡ ಜವಾಬ್ದಾರಿ. ಪ್ರತಿಭಾನ್ವಿತ ಆಟಗಾರ್ತಿಯರೊಂದಿಗೆ ಕಾರ್ಯನಿರ್ವಹಿಸುವುದನ್ನು ನಾನೀಗ ಎದುರು ನೋಡುತ್ತಿರುವೆ.
| ಅಮೋಲ್ ಮುಜುಮ್ದಾರ್