

Bengaluru Stampede: ಜೂ.04ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, ಅಭಿಮಾನಿಗಳ ಕುಟುಂಬಸ್ಥರ ಮನೆಗಳಲ್ಲಿ ಸೂತಕದ ಛಾಯೇ ಆವರಿಸಿದೆ. ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿದ ಆರ್ಸಿಬಿ ಗೆಲುವನ್ನು ಸಂಭ್ರಮಿಸಲು ಸ್ಟೇಡಿಯಂಗೆ ಧಾವಿಸಿದ ಅಭಿಮಾನಿಗಳು, ನೂಕುನುಗ್ಗಲು ಉಂಟಾದ ಹಿನ್ನೆಲೆ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರ್ಸಿಬಿ ಅಭಿಮಾನಿಗಳ ಸಾವಿಗೆ ಆರ್ಸಿಬಿ ಅಭಿಮಾನಿ ಬಳಗ, ಫ್ರಾಂಚೈಸಿ ಸೇರಿದಂತೆ ದೇಶದ ಜನತೆ ಕಂಬನಿ ಮಿಡಿದಿದೆ. ನಡೆಯಬಾರದ ಘನಘೋರ ದುರಂತಕ್ಕೆ 11 ಅಭಿಮಾನಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಹಿಗ್ಗಾಮುಗ್ಗಾ ಜಾಡಿಸಿರುವ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಮದನ್ ಲಾಲ್, "ಪಂದ್ಯ ಗೆದ್ದ ಮರುದಿನವೇ ಬೆಂಗಳೂರಿನ ಸಂಭ್ರಮಾಚರಣೆ ಏಕೆ ಬೇಕಿತ್ತು?" ಎಂದು ಪ್ರಶ್ನಿಸಿದ್ದಾರೆ.
"11 ಜನರು ಮೃತಪಟ್ಟ ಸುದ್ದಿ ಕೇಳಿ ಭಾರೀ ಬೇಸರವಾಯಿತು. ಇದು ನಡೆಯಬಾರದಿತ್ತು. ಅಹಮದಾಬಾದ್ನಲ್ಲಿ ಸಂಭ್ರಮ, ಸಡಗರ ಮಾಡಿದ್ದೀರಿ ತಾನೇ? ಮತ್ತೆ ಬೆಂಗಳೂರಿನಲ್ಲಿ ಸಂಭ್ರಮಿಸಲು ಅಷ್ಟು ಅರ್ಜೆಂಟ್ ಏನಿತ್ತು. ಒಂದೆರೆಡು ದಿನಗಳ ಬಳಿಕ ಹೋಗಬಹುದಿತ್ತಲ್ವಾ? ಸಮಯ ಸರಿಯಾಗಿ ನಿಗದಿಪಡಿಸಿಕೊಂಡು ಯೋಜನೆ ಮಾಡಬೇಕಿತ್ತು. ಹಾಗೇನಾದರೂ ಮಾಡಿದಿದ್ದರೆ ಖಂಡಿತ ಇಂಥಾ ದುರ್ಘಟನೆ ಸಂಭವಿಸುತ್ತಿರಲಿಲ್ಲ" ಎಂದರು.
"ಇಲ್ಲಿ ಫ್ರಾಂಚೈಸಿ ತಪ್ಪಿಸಿಕೊಳ್ಳುವಂತಿಲ್ಲ. ಇದು ಆರ್ಸಿಬಿ ಮತ್ತು ಕಾರ್ಯಕ್ರಮ ಆಯೋಜಿಸಿದ ರಾಜ್ಯ ಸರ್ಕಾರದ ತಪ್ಪು. ಘಟನೆ ನಡೆದ ಮೇಲೂ ಆಟಗಾರರು ಕಪ್ ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಫ್ರಾಂಚೈಸಿ ಮಾಲೀಕರ ತಪ್ಪು ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಈ ಘಟನೆಯಲ್ಲಿ ಬಿಸಿಸಿಐ ಪಾತ್ರವಿಲ್ಲ. ಇದು ಸಂಪೂರ್ಣವಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ನದ್ದು. ಭದ್ರತಾ ಪಡೆಯೊಂದಿಗೆ ಅವರು ಸಂಪರ್ಕದಲ್ಲಿರಬೇಕಿತ್ತು. ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಈಗ ಯಾರು ದಿಕ್ಕು?" ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).