ಆಂಬ್ಯುಲೆನ್ಸ್ ಇಲ್ಲ, ಖಾಕಿ ಸಹಾಯಕ್ಕೆ ಬರಲಿಲ್ಲ! ಇದೇ ರಾಜಕೀಯ ಸಭೆ ಆಗಿದ್ರೆ ಬಿರಿಯಾನಿ ವ್ಯವಸ್ಥೆ ಮಾಡ್ತಿದ್ರು: ದಿವ್ಯಾಂಶಿ ತಂದೆ ಆಕ್ರೋಶ | Stampede

ವಿಜಯವಾಣಿ (19)
Published on

Bengaluru Stampede: ನಿನ್ನೆ (ಜೂ.04) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟರು. ಚೊಚ್ಚಲ ಐಪಿಎಲ್​ ಟ್ರೋಫಿ ಎತ್ತಿಹಿಡಿದ ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಸ್ಟೇಡಿಯಂಗೆ ಧಾವಿಸಿದ ಅಭಿಮಾನಿಗಳು, ನೂಕುನುಗ್ಗಲು ಉಂಟಾದ ಹಿನ್ನೆಲೆ ಕಾಲ್ತುಳಿತಕ್ಕೆ ಬಲಿಯಾದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ, ಕೆಲವರು ಚಿಂತಾಜನಕ ಸ್ಥಿತಿ ತಲುಪಿದ್ದಾರೆ. ಮೃತರ ಪೈಕಿ ದಿವ್ಯಾಂಶಿ ಪೋಷಕರು ಇದೀಗ ಗಂಭೀರ ಆರೋಪ ಹೊರಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಹೈಕೋರ್ಟ್​ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ದಾಖಲಿಸಿಕೊಂಡಿದೆ. ಮೃತರ ಕುಟುಂಬಗಳು ಬಾಳಿ ಬದುಕಬೇಕಿದ್ದ ತಮ್ಮ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಈ ಮಧ್ಯೆ ಮೃತ ದಿವ್ಯಾಂಶಿ ತಂದೆ ಶಿವಕುಮಾರ್ ಮಾಧ್ಯಮಗಳಿಗೆ ಮಾತನಾಡಿ, "ರಾಜಕೀಯ ಸಭೆ, ಕಾರ್ಯಕ್ರಮಗಳಿಗೆ ಇರುವ ಅದ್ಭುತ ಹಾಗೂ ಉತ್ತಮ ವ್ಯವಸ್ಥೆ ಇಲ್ಲಿ ಯಾಕಿರಲಿಲ್ಲ? ಇಂತಹ ಸಂಭ್ರಮದ ಈವೆಂಟ್​ಗೆ ಒಂದೇ ಒಂದು ಸರಿಯಾದ ವ್ಯವಸ್ಥೆಯೇ ಇರಲಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ.

"ಅಮ್ಮ ಮತ್ತು ಚಿಕ್ಕಮ್ಮ ಜೊತೆಗೆ ಚಿನ್ನಸ್ವಾಮಿಯ ಗೇಟ್​ ನಂ.15ರಲ್ಲಿ ಪ್ರವೇಶ ಪಡೆದ ದಿವ್ಯಾಂಶಿ, ಕೆಲವೇ ನಿಮಿಷಗಳಲ್ಲಿ ಉಂಟಾದ ಕಾಲ್ತುಳಿತಕ್ಕೆ ತುತ್ತಾದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ಸಂಭವಿಸಿದ ತಕ್ಷಣ ಮೊಬೈಲ್​ನಲ್ಲಿ ಕುಟುಂಬಸ್ಥರ ಸಹಾಯ ಪಡೆಯಲು ಪತ್ನಿ ಪ್ರಯತ್ನಿಸಿದರು. ಆದ್ರೆ, ಮೊಬೈಲ್ ಜಾಮರ್​ನಿಂದ ಅದು ಸಾಧ್ಯವಾಗಿಲ್ಲ. ಕ್ಯಾಬ್​ನಲ್ಲೇ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಅಸ್ಪತ್ರೆ ಸಿಬ್ಬಂದಿಗಳು ನನ್ನ ಪುತ್ರಿಯನ್ನು ಮುಟ್ಟಲು ಮುಂದಾಗಲಿಲ್ಲ. ಅಲ್ಲಿನ ವ್ಯವಸ್ಥೆ ಕಿಂಚಿತ್ತು ಸರಿಯಿರಲಿಲ್ಲ. ನನ್ನ ಪತ್ನಿಯೇ ಮಗಳಿಗೆ ಸಿಪಿಆರ್​ ಮಾಡಿದಳು" ಎಂದಿದ್ದಾರೆ.

"ಒಂದೇ ಒಂದು ಆಂಬ್ಯುಲೆನ್ಸ್ ಇರಲಿಲ್ಲ. ಪೊಲೀಸರು ಸಹಾಯಕ್ಕೆ ಬರಲಿಲ್ಲ. ಎಫ್​ಐಆರ್​ ದಾಖಲಿಸಲು ಸುಮಾರು 4 ತಾಸು ಪೊಲೀಸ್​ ಠಾಣೆಯಲ್ಲೇ ಕಾದೆವು. ಯಾರು ಇಂಥಾ ಸ್ಥಿತಿಯಲ್ಲಿ ಕಾದು ಕೂರುತ್ತಾರೆ ನೀವೇ ಹೇಳಿ? ಒಂದೂ ವ್ಯವಸ್ಥೆಯನ್ನು ಸರಿಯಾಗಿ ಪ್ಲಾನ್ ಮಾಡಿಲ್ಲ. ಸ್ಟೇಡಿಯಂನಲ್ಲಿ ಎಷ್ಟು ಜನ ಕೂರಬಹುದು, ಎಷ್ಟು ಜನ ಬರ್ತಾರೆ ಎಂಬ ಸಣ್ಣ ಲೆಕ್ಕಾಚಾರ ಅವರಿಗಿರಲಿಲ್ಲ. ಇದೇ ರಾಜಕೀಯ ಸಭೆ ಆಗಿದ್ದರೆ ಬಿರಿಯಾನಿ ವ್ಯವಸ್ಥೆ ಮಾಡಿಸಿರುತ್ತಿದ್ದರು" ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).

ಕಾಲ್ತುಳಿತಕ್ಕೆ ಬಲಿಯಾದ ಅಭಿಮಾನಿಗಳಿವರು

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ದ್ವಾರಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು ಹನ್ನೊಂದು ಅಭಿಮಾನಿಗಳು ಸಾವನ್ನಪ್ಪಿದ್ದು, 47 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಎ.ಎಸ್. ದಿವ್ಯಾಂಶಿ (13), ದೊರೆಶ (32), ಭೂಮಿಕ್ (20), ಸಹನಾ (25), ಅಕ್ಷತಾ (27), ಮನೋಜ್ (33), ಶ್ರವಣ್ (20), ದೇವಿ (29), ಶಿವಲಿಂಗ (17) ಮತ್ತು ಚಿನ್ಮಯಿ (19) ಮತ್ತು ಪ್ರಜ್ವಲ್ (20) ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net