

ಮಂಡ್ಯ: ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಚಿತ್ರ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ನಟ ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಮಲ್ ಹಾಸನ್ ಸುಳ್ಳು ಮತ್ತು ಆಧಾರರಹಿತ ಹೇಳಿಕೆಯು ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕನ್ನಡಿಗರಿಂದ ತೀವು ಖಂಡನೆ ಮತ್ತು ವಿರೋಧ ವ್ಯಕ್ತವಾದರೂ, ಕ್ಷಮೆಯಾಚಿಸದೆ ತಮ್ಮ ಹೇಳಿಕೆಗೆ ಬದ್ಧರಾಗಿರುವುದು ಕನ್ನಡಿಗರ ಆಕ್ರೋಶವನ್ನು ಮತ್ತು ಹೆಚ್ಚಿಸಿದೆ ಎಂದು ಕಿಡಿಕಾರಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಕರವೇ ಕಮಲ್ ಹಾಸನ್ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಅವರ ಹೊಸ ಚಿತ್ರ ಥಗ್‌ಲೈಫ್ ಜೂ.5ರಂದು ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆಯಬೇಕು. ಈ ಚಿತ್ರದ ವಿತರಕರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಕರ್ನಾಟಕದಲ್ಲಿ ಈ ಚಿತ್ರದ ಬಿಡುಗಡೆಗೆ ಯಾವುದೇ ಸಹಕಾರ ನೀಡಬಾರದೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಮಿತಿ ಸದಸ್ಯ ಮ.ಸೋ.ಚಿದಂಬರ್, ಜಿಲ್ಲಾ ಗೌರವಾಧ್ಯಕ್ಷ ಶಂಕರೇಗೌಡ, ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಗೌರವಾಧ್ಯಕ್ಷೆ ಸುಜಾತಾ ಕೃಷ್ಣ, ಮಹಿಳಾಧ್ಯಕ್ಷೆ ಭಾರತೀಕುಮಾರ್, ತೇಜುಕುಮಾರ್, ಶ್ರೀನಿವಾಸ್, ರಾಮಚಂದ್ರ, ಅಪ್ಪೇಗೌಡ, ಪ್ರಭು ಇತರರಿದ್ದರು.