ಇವರಿಬ್ಬರು ತಂಡದಲ್ಲಿ ಇಲ್ಲದ್ದಕ್ಕೆ ಏಕದಿನ ಸರಣಿ ಕೈತಪ್ಪಿತು! ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗ ಕೆಂಡಾಮಂಡಲ

ವಿಜಯವಾಣಿ - 2024-08-09T130559.349
Published on

ನವದೆಹಲಿ: ಇತ್ತೀಚೆಗಷ್ಟೇ ಅಂತ್ಯಗೊಂಡ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯ ಪೈಕಿ 3-0 ಅಂತರದಿಂದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ, ರೋಹಿತ್ ಶರ್ಮ ಕ್ಯಾಪ್ಟನ್ಸಿಯಲ್ಲಿ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳಲು ವಿಫಲವಾಯಿತು. ಈ ಸೋಲು ಅಷ್ಟು ಕಾಡದೆ ಇದ್ದರೂ ಎರಡು 50 ಓವರ್​ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಗೆ ಭಾರೀ ಬೇಸರ ತಂದೊಡ್ಡಿದೆ. ಈ ವಿಷಯ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮಾಜಿ ಕ್ರಿಕೆಟಿಗ ಬಸಿತ್​ ಅಲಿ ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಟಿ20 ಸರಣಿ ಗೆದ್ದ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಸೂರ್ಯಕುಮಾರ್ ಯಾದವ್​. ಕ್ಯಾಪ್ಟನ್ಸಿ ಜತೆ ಸಿರೀಸ್​ ಗೆಲುವಿಗೆ ಕಾರಣರಾದ 'ಸ್ಕೈ'ರನ್ನು ರೋಹಿತ್ ನೇತೃತ್ವದ ಏಕದಿನ ತಂಡಕ್ಕೂ ಹಾಕಬಹುದಿತ್ತು. ಸೂರ್ಯ ಮತ್ತು ಆರಂಭಿಕ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​ ಈ ತಂಡದಲ್ಲಿ ಇದ್ದಿದ್ರೆ ಖಂಡಿತ ಟೀಮ್ ಇಂಡಿಯಾ ಬ್ಯಾಟಿಂಗ್​ ಯೂನಿಟ್​​ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಳ್ಳದ ಅಜಿತ್ ಅಗರ್ಕರ್​ ಅವರ ಆಯ್ಕೆ ಸಮಿತಿ, ಇದೀಗ ತಂಡದ ಹೀನಾಯ ಸೋಲಿಗೆ ಕಾರಣವಾಗಿದೆ" ಎಂದು ದೂರಿದ್ದಾರೆ.

"ಈ ಸರಣಿಯಿಂದ ಸ್ಪಷ್ಟವಾಗಿದ್ದು ಯಶಸ್ವಿ ಜೈಸ್ವಾಲ್ ಒಬ್ಬ ಅದ್ಭುತ ಯುವ ಬ್ಯಾಟರ್ ಎಂಬುದು​. ಜೈಸ್ವಾಲ್​ ಶುಭಮನ್​ ಗಿಲ್​ಗಿಂತ ಅತ್ಯುತ್ತಮ ಬ್ಯಾಟ್ಸ್​ಮನ್​. ಈ ಬಗ್ಗೆ ಎರಡನೇ ಮಾತಿಲ್ಲ. ಯಶಸ್ವಿ ಮತ್ತು ಸೂರ್ಯಕುಮಾರ್ ಯಾದವ್​ರನ್ನು ಆಯ್ಕೆ ಮಾಡದಿರುವುದು ರಾಷ್ಟ್ರೀಯ ಆಯ್ಕೆಗಾರರ ದೊಡ್ಡ ತಪ್ಪು" ಎಂದು ದೂಷಿಸಿದರು. ಮೊದಲನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಬ್ಯಾಟರ್​​ಗಳು ಹೆಚ್ಚು ಕಾಲ ನಿಲ್ಲದೆ ಪೆವಿಲಿಯನ್​ನತ್ತ ಮುಖಮಾಡಿದರು. ಆದರೆ, ಕ್ಯಾಪ್ಟನ್ ಆಟ ಬಿಡದ ರೋಹಿತ್​, ಮೂರು ಮ್ಯಾಚ್​ಗಳಿಂದ 157 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net