ಮಾಜಿ ಕ್ರಿಕೆಟಿಗ ಸಂಜಯ್​ ಬಂಗಾರ್​ ಪುತ್ರ ಹೆಣ್ಣಾಗಿ ಬದಲಾದರೂ ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ! ಹೀಗಿದೆ ಐಸಿಸಿ ನಿಯಮಾವಳಿ...

web sanjay
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​ ಅವರ ಪುತ್ರ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾಗಿದ್ದಾರೆ. ಆರ್ಯನ್​ ಬಂಗಾರ್​ ಈಗ ಅನಾಯಾ ಬಂಗಾರ್​ ಆಗಿದ್ದಾರೆ. ಆದರೂ ಐಸಿಸಿ ನಿಯಮಾವಳಿಯ ಪ್ರಕಾರ ಅವರು ಮಹಿಳಾ ಕ್ರಿಕೆಟ್​ನಲ್ಲಿ ಭಾಗವಹಿಸುವಂತಿಲ್ಲ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಅನಾಯಾ ಬಂಗಾರ್​ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಮೋರ್ನು ಬದಲಾವಣೆ ಚಿಕಿತ್ಸೆಗೆ ಒಳಗಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ 23 ವರ್ಷದ ಅನಾಯಾ, ತಂದೆಯಂತೆ ವೃತ್ತಿಪರ ಕ್ರಿಕೆಟ್​ನಲ್ಲಿ ಆಡುವ ತನ್ನ ಕನಸು ನನಸಾಗದ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ. ಅನಾಯಾ ಸದ್ಯ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ನೆಲೆಸಿದ್ದಾರೆ. ಈ ಮುನ್ನ ಗಂಡಾಗಿದ್ದಾಗ ಮುಂಬೈನ ಸ್ಥಳಿಯ ಕ್ರಿಕೆಟ್​ ಕ್ಲಬ್​ "ಇಸ್ಲಾಂ ಜಿಮ್ಖಾನ' ಪರ ಆಡುತ್ತಿದ್ದರು. ವಿಜಯ್​ ಮರ್ಚೆಂಟ್​ ಟ್ರೋಫಿ 16 ವಯೋಮಿತಿ ಟೂರ್ನಿಯಲ್ಲಿ ಮುಂಬೈ ಪರ ಆಲ್ರೌಂಡರ್​ ಆಗಿ ಆಡಿದ್ದರು. ಮಹಾರಾಷ್ಟ್ರದ ಸಂಜಯ್​ ಬಂಗಾರ್​ ಭಾರತ ಪರ 12 ಟೆಸ್ಟ್​ ಮತ್ತು 15 ಏಕದಿನ ಪಂದ್ಯ ಆಡಿದ್ದಾರೆ.

"ಬಾಲ್ಯದಿಂದಲೂ ಕ್ರಿಕೆಟ್​ ನನ್ನ ಜೀವನದ ಭಾಗವಾಗಿತ್ತು. ನನ್ನ ತಂದೆ ದೇಶದ ಪರ ಆಡಿದ್ದಾರೆ ಮತ್ತು ತರಬೇತಿಯನ್ನೂ ನೀಡಿದ್ದಾರೆ. ನಾನು ಕೂಡ ಅವರ ಹೆಜ್ಜೆಯಲ್ಲೇ ಸಾಗುವ ಕನಸು ಕಾಣುತ್ತಿದ್ದೆ. ಕ್ರಿಕೆಟ್​ ನನ್ನ ಪ್ರೀತಿ, ಧ್ಯೇಯ ಮತ್ತು ಭವಿಷ್ಯ ಆಗಿತ್ತು. ಕ್ರಿಕೆಟ್​ ತ್ಯಜಿಸುವ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಆದರೆ ಈಗ ನೋವಿನ ವಾಸ್ತವದ ಅರಿವಾಗಿದೆ. ಲಿಂಗ ಬದಲಾವಣೆಯ ಬಳಿಕ ನಾನು ಸಂಪೂರ್ಣ ಹೆಣ್ಣಾಗಿ ಬದಲಾಗಿದ್ದರೂ, ಮಹಿಳಾ ಕ್ರಿಕೆಟ್​ನಲ್ಲಿ ಆಡಲು ಅವಕಾಶ ಇಲ್ಲದಂತಾಗಿದೆ' ಎಂದು ಅನಾಯಾ ಬಂಗಾರ್​ ಬರೆದುಕೊಂಡಿದ್ದಾರೆ.

ಐಸಿಸಿ ಇತ್ತೀಚೆಗೆ ತಂದಿರುವ ನಿಯಮಾವಳಿ ಪ್ರಕಾರ, ಪುರುಷನಾಗಿ ಪ್ರೌಢಾವಸ್ಥೆಗೆ ಬಂದ ನಂತರ ಲಿಂಗ ಬದಲಾವಣೆ ಮಾಡಿಕೊಂಡರೆ ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ. ಆದರೆ ಅಪ್ರಾಪ್ತರು ಲಿಂಗ ಬದಲಾವಣೆ ಮಾಡಿಕೊಳ್ಳುವುದು ಕೂಡ ಕಾನೂನುಬಾಹಿರವಾಗಿದೆ. ಹೀಗಾಗಿ ಈ ವಿಚಿತ್ರ ವ್ಯವಸ್ಥೆಯಿಂದಾಗಿ ತಾನು ಕ್ರಿಕೆಟ್​ ಆಡುವ ಕನಸನ್ನು ಕೈಚೆಲ್ಲಬೇಕಾಗಿದೆ ಎಂದು ಅನಾಯಾ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net