ನವದೆಹಲಿ: ವೇಳಾಪಟ್ಟಿಯ ಬಗೆಗಿನ ಗೊಂದಲದಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ಸೋಮವಾರ ಲಾಹೋರ್ನಲ್ಲಿ ನಿಗದಿಪಡಿಸಲಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. 2025ರ ಫೆಬ್ರವರಿ 19ರಿಂದ ಮಾರ್ಚ್ 19ರವರೆಗೆ ನಿಗದಿಯಾಗಿರುವ ಏಕದಿನ ಟೂರ್ನಿಯ 100 ದಿನಗಳ ಕೌಂಟ್ಡೌನ್ ಭಾಗವಾಗಿ ಈ ಕಾರ್ಯಕ್ರಮ ನಡೆಯಬೇಕಾಗಿತ್ತು.
ಇದೇ ವೇಳೆ ಟೂರ್ನಿಯ ವೇಳಾಪಟ್ಟಿಯೂ ಪ್ರಕಟಗೊಳ್ಳುವ ನಿರೀಕ್ಷೆ ಇಡಲಾಗಿತ್ತು. ಆದರೆ ಟೂರ್ನಿಯ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಆತಿಥೇಯ ಮತ್ತು ಪಾಲ್ಗೊಳ್ಳುವ ದೇಶಗಳ ನಡುವೆ ಚರ್ಚೆಗಳು ಮುಂದುವರಿದಿವೆ. ಹೀಗಾಗಿ ಅದು ಅಂತಿಮಗೊಂಡ ಬಳಿಕವೇ ಕಾರ್ಯಕ್ರಮ ನಡೆಲಾಗುವುದು ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೂರ್ನಿಯಲ್ಲಿ ಆಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂಬ ವರದಿಗಳ ನಡುವೆ ಈ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಸಿಸಿಐ, ಐಸಿಸಿಗೆ ಈಗಾಗಲೆ ತಿಳಿಸಿದೆ ಮತ್ತು ಹೈಬ್ರಿಡ್ ಮಾದರಿಯಲ್ಲಿ (ಭಾರತದ ಪಂದ್ಯಗಳು ಪಾಕ್ನಿಂದ ಹೊರಗೆ) ಟೂರ್ನಿ ನಡೆಸುವಂತೆ ಕೇಳಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದನ್ನು ನಿರಾಕರಿಸುತ್ತ ಬಂದಿದೆ.
ರಣಜಿ ಟ್ರೋಫಿಯಲ್ಲಿ ಕರ್ನಾಟಕದ ನಾಕೌಟ್ ಹಾದಿ ಕಠಿಣ; ಹೀಗಿದೆ ಮುಂದಿನ ಸವಾಲು…