ಮಹಿಳಾ ಟಿ20 ಹಬ್ಬಕ್ಕೆ ವೇದಿಕೆ ಸಜ್ಜು; ಇಂದಿನಿಂದ ಬೆಂಗಳೂರಿನಲ್ಲಿ ಡಬ್ಲುಪಿಎಲ್​; ಮುಂಬೈ-ಡೆಲ್ಲಿ ಮೊದಲ ಪಂದ್ಯ

wpl web
Published on

ಬೆಂಗಳೂರು: ಪುರುಷರ ಐಪಿಎಲ್​ ಟೂರ್ನಿ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಳಿಕ ಮಹಿಳಾ ಕ್ರಿಕೆಟಿಗರ ಕನಸಿಗೆ ರೆಕ್ಕೆ ನೀಡಿದ "ಮಹಿಳಾ ಐಪಿಎಲ್​' ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​(ಡಬ್ಲುಪಿಎಲ್​) ಎರಡನೇ ಆವೃತ್ತಿಗೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಲಿದೆ. ಮೊದಲ ಆವೃತ್ತಿಯನ್ನು ಮುಂಬೈ ನಗರದಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದ ಬಿಸಿಸಿಐ, ಮಹಿಳಾ ಕ್ರಿಕೆಟ್​ಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಬಾರಿ ಎರಡು ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಿಗದಿಯಾಗಿದ್ದು, 24 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ರನ್ನರ್​ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಆರ್​ಸಿಬಿ ಮಹಿಳಾ ತಂಡ ಎರಡನೇ ದಿನ ಯುಪಿ ವಾರಿಯರ್ಸ್​ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿ ನೀರಸ ನಿರ್ವಹಣೆ ತೋರಿದ್ದ ಸ್ಮೃತಿ ಮಂದನಾ ನೇತೃತ್ವದ ಬೆಂಗಳೂರು ತಂಡ ಈ ಬಾರಿ ತವರು ಅಭಿಮಾನಿಗಳ ಬೆಂಬಲದೊಂದಿಗೆ "ಈ ಸಲ ಕಪ್​' ತನ್ನದಾಗಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

5 ತಂಡಗಳ ನಾಯಕಿಯರು

*ಬೆತ್​ ಮೂನಿ (ಗುಜರಾತ್​ ಜೈಂಟ್ಸ್​)

*ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್​)

*ಮೆಗ್​ ಲ್ಯಾನಿಂಗ್​ (ಡೆಲ್ಲಿ ಕ್ಯಾಪಿಟಲ್ಸ್​)

*ಸ್ಮೃತಿ ಮಂದನಾ (ಆರ್​ಸಿಬಿ)

*ಹರ್ಮಾನ್​ಪ್ರೀತ್​ ಕೌರ್​ (ಮುಂಬೈ ಇಂಡಿಯನ್ಸ್​)

ತವರು-ಎದುರಾಳಿ ನೆಲದ ನಿಯಮವಿಲ್ಲ

ಕಳೆದ ಬಾರಿಯಂತೆ ತವರು-ಎದುರಾಳಿ ಎಂಬ ನಿಯಮವಿಲ್ಲದೆ ಪಂದ್ಯಗಳನ್ನು ನಿಗದಿ ಮಾಡಲಾಗಿದ್ದು, ಮೊದಲ ಚರಣದ 11 ಲೀಗ್​ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ಎರಡನೇ ಚರಣದ ಲೀಗ್​, ಪ್ಲೇಆಫ್​ ಹಾಗೂ ಫೈನಲ್​ ಪಂದ್ಯ ಸೇರಿ ಒಟ್ಟು 11 ಪಂದ್ಯಗಳು ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಬಹುಮಾನ ಮೊತ್ತ: ಒಟ್ಟು 10 ಕೋಟಿ ರೂ.

ಚಾಂಪಿಯನ್​: 6 ಕೋಟಿ ರೂ.

ರನ್ನರ್​ಅಪ್​: 3 ಕೋಟಿ ರೂ.

3ನೇ ಸ್ಥಾನಿ: 1 ಕೋಟಿ ರೂ.

ರೌಂಡ್​ ರಾಬಿನ್​ ಲೀಗ್​

ಟೂರ್ನಿಯಲ್ಲಿ ಆಡುವ ಒಟ್ಟು 5 ತಂಡಗಳು ಲೀಗ್​ ಹಂತದಲ್ಲಿ ರೌಂಡ್​ ರಾಬಿನ್​ ಮಾದರಿಯಲ್ಲಿ ತಲಾ 2 ಬಾರಿ ಮುಖಾಮುಖಿ ಆಗಲಿವೆ. ಲೀಗ್​ ಹಂತದಲ್ಲಿ ಎಲ್ಲ ತಂಡಗಳು ತಲಾ 8 ಪಂದ್ಯ ಆಡಲಿವೆ. ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್​ಗೇರಲಿದೆ. 2&3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್​ ಪಂದ್ಯದಲ್ಲಿ ಫೈನಲ್​ಗೇರಲು ಹೋರಾಡಲಿವೆ. ಮಾರ್ಚ್​ 17ರಂದು ಫೈನಲ್​ ಪಂದ್ಯ ನಡೆಯಲಿದೆ.

ಆರ್​ಸಿಬಿಗೆ ಸ್ಮೃತಿ ಸಾರಥ್ಯ

ಚೊಚ್ಚಲ ಆವೃತ್ತಿಯಲ್ಲಿ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರುವಲ್ಲಿ ವಿಫಲವಾಗಿರುವ ಆರ್​ಸಿಬಿ ತಂಡವನ್ನು ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದನಾ ಈ ಬಾರಿಯೂ ಮುನ್ನಡೆಸಲಿದ್ದಾರೆ. ಕನ್ನಡತಿ, ಆಲ್ರೌಂಡರ್​ ಶ್ರೇಯಾಂಕ ಪಾಟೀಲ್​, ವಿಶ್ವದ ಶ್ರೇಷ್ಠ ಆಲ್ರೌಂಡರ್​ ಆಸ್ಟ್ರೆಲಿಯಾದ ಎಲ್ಲಿಸ್​ ಪೆರ್ರಿ, ವಿಕೆಟ್​ ಕೀಪರ್​ ರಿಚಾ ಘೋಚ್​, ಬೌಲಿಂಗ್​ನಲ್ಲಿ ರೇಣುಕಾ ಸಿಂಗ್​ ಪ್ರಮುಖ ಆಟಗಾರ್ತಿಯರಾಗಿದ್ದು, ಅನುಭವಿ ಸ್ಪಿನ್ನರ್​ ಏಕ್ತಾ ಬಿಷ್ತ್​ ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್​ಸಿಬಿ, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು.

ಮುಂಬೈ ಇಂಡಿಯನ್ಸ್​ ಮತ್ತೆ ಫೇವರಿಟ್​

ಚೊಚ್ಚಲ ಆವೃತ್ತಿಯಲ್ಲಿ ಸತತ ಐದು ಪಂದ್ಯ ಗೆದ್ದ ದಾಖಲೆ ಹೊಂದಿರುವ ಭಾರತ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಮುಂಬೈ ಇಂಡಿಯನ್​ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಣಕ್ಕಿಳಿಯಲಿದೆ. ಪುರುಷರ ಐಪಿಎಲ್​ ತಂಡದಂತೆ ಡಬ್ಲುಪಿಎಲ್​ನಲ್ಲಿಯೂ ಮುಂಬೈ ಪ್ರಾಬಲ್ಯ ಸಾಧಿಸಿದ್ದು, ವಿಂಡೀಸ್​ನ ಹ್ಯಾಲೆ ಮ್ಯಾಥ್ಯೂಸ್​ ಮೊದಲ ಆವೃತ್ತಿಯಲ್ಲಿ ಪರ್ಪಲ್​ ಕ್ಯಾಪ್​ (ಗರಿಷ್ಠ ವಿಕೆಟ್​) ಒಲಿಸಿಕೊಂಡಿದ್ದರು. ಇಂಗ್ಲೆಂಡ್​ ನ್ಯಾಟ್​ ಸೀವರ್​ ಬ್ರಂಟ್​, ನ್ಯೂಜಿಲೆಂಡ್​ನ ಅಮೆಲಿಯಾ ಕೆರ್​ ಪೂಜಾ ವಸ್ತ್ರಾಕರ್​, ಹ್ಯಾಟ್ರಿಕ್​ ಸಾಧಿಸಿರುವ ಇಸ್ಸಿ ವಾಂಗ್​ ತಂಡದ ಪ್ರಮುಖ ಆಟಗಾರ್ತಿಯರು.

ಡೆಲ್ಲಿ ಕ್ಯಾಪಿಟಲ್ಸ್​

ಅತ್ಯಂತ ಯಶಸ್ವಿ ಮಹಿಳಾ ಕ್ಯಾಪ್ಟನ್​ ಆಸೀಸ್​ ಮೆಗ್​ ಲ್ಯಾನಿಂಗ್​ ತಂಡವನ್ನು ಮುನ್ನಡೆಸಲಿದ್ದು, ಕಳೆದ ಬಾರಿ ತಪ್ಪಿದ ಪ್ರಶಸ್ತಿಯನ್ನು ಈ ಬಾರಿ ತನ್ನದಾಗಿಸಿಕೊಳ್ಳುವ ಹಂಬಲದಲ್ಲಿದೆ. ಶೆಫಾಲಿ ವರ್ಮ, ಜೆಮೀಮಾ ರೋಡ್ರಿಗಸ್​ ಪ್ರಮುಖ ಆಟಗಾರ್ತಿಯರೆನಿಸಿದ್ದು, ಆಲ್ರೌಂಡರ್​ ಅನ್ನಾಬೆಲ್​ ಸುದರ್​ಲ್ಯಾಡ್​​ ಸೇರ್ಪಡೆ ಹೆಚ್ಚಿನ ಬಲ ತಂದಿದೆ. ವಿಶ್ವದ ಪ್ರಮುಖ ಸ್ಟಾರ್​ ಆಟಗಾರರನ್ನು ಒಳಗೊಂಡಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಯುಪಿ ವಾರಿಯರ್ಸ್​

ಆಸ್ಟ್ರೆಲಿಯಾದ ಅಲೀಸ್ಸಾ ಹಿಲಿ ಯುಪಿ ವಾರಿಯರ್ಸ್​ ನೇತೃತ್ವವನ್ನು ವಹಿಸಿಕೊಂಡಿದ್ದು, ಭಾರತದ ಮಹಿಳಾ ತಂಡದ ಆಲ್ರೌಂಡರ್​ ದೀಪ್ತಿ ಶರ್ಮ ಸ್ಟಾರ್​ ಪ್ಲೇಯರ್​ ಆಗಿದ್ದಾರೆ. ಕರ್ನಾಟಕದ ಬ್ಯಾಟರ್​ ಬ್ಯಾಟುಗಾರ್ತಿ ವೃಂದಾ ದಿನೇಶ್​ ಅವರನ್ನು ದಾಖಲೆ ಮೊತ್ತಕ್ಕೆ ಖರೀದಿಸಿದೆ. ಇಂಗ್ಲೆಂಡ್​ ಸೋಫಿ ಎಕೆಲ್​ ಸ್ಟೋನ್​ , ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ ತಂಡದಲ್ಲಿರುವ ಪ್ರಮುಖರು. ಕಳೆದ ಆವೃತ್ತಿಯಲ್ಲಿ ಎಲಿಮಿನೇಟರ್​ನಲ್ಲಿ ಸೋತು 3ನೇ ಸ್ಥಾನಿ ಎನಿಸಿತ್ತು.

ಗುಜರಾತ್​ ಜೈಂಟ್ಸ್​

ಉದ್ಘಾಟನಾ ಆವೃತ್ತಿಯಲ್ಲಿ ಕೊನೇ ಸ್ಥಾನ ಪಡೆದಿದ್ದ ಗುಜರಾತ್​ ಜೈಂಟ್ಸ್​ ಈ ಬಾರಿ ಹೊಸ ಆರಂಭ ಕಾಣುವ ನಿರೀೆಯಲ್ಲಿ ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿ ಅರ್ಧದಲ್ಲಿ ಹೊರಬಿದ್ದ ನಾಯಕಿ ಬೆಥ್​ ಮೂನಿ ಈ ಬಾರಿ ಪ್ರಶಸ್ತಿಯತ್ತ ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ. ಮುಖ್ಯ ಕೋಚ್​ ಆಗಿ ಮೈಕೆಲ್​ ಕ್ಲಿಂಗರ್​ ಮೊದಲ ಸೀಸನ್​ ಇದಾಗಿದೆ. ಆಲ್ರೌಂಡರ್​ ಆಶ್ಲೇ ಗಾರ್ಡನ್​, ಪೋಬಿ ಲಿಚ್​ಪೀಲ್ಡ್​, ಹರ್ಲಿನ್​ ಡಿಯೋಲ್​ ಬಲವಿದೆ.

ಐವರು ಕನ್ನಡತಿಯರು

ಡಬ್ಲುಪಿಎಲ್​ನಲ್ಲಿ ಕನ್ನಡತಿಯರಾದ ಶ್ರೇಯಾಂಕಾ ಪಾಟೀಲ್​, ಶುಭಾ ಸತೀಶ್​ (ಆರ್​ಸಿಬಿ), ವೇದಾ ಕೃಷ್ಣಮೂರ್ತಿ (ಗುಜರಾತ್​), ವೃಂದಾ ದಿನೇಶ್​ , ರಾಜೇಶ್ವರಿ ಗಾಯಕ್ವಾಡ್​ (ಯುಪಿ ವಾರಿಯರ್ಸ್​) ಆಡಲಿದ್ದು, ಕಳೆದ ಬಾರಿ ಆಡಿದ್ದ ಸಹನಾ ಪವಾರ್​ ಹಾಗೂ ಮೋನಿಕಾ ಪಟೇಲ್​ ಈ ಬಾರಿ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರು.

ವುಮೆನ್ಸ್​ ಪ್ರೀಮಿಯರ್​ ಲೀಗ್​ ವೇಳಾಪಟ್ಟಿ

ದಿನಾಂಕ ಪಂದ್ಯ

ಬೆಂಗಳೂರು ಚರಣ (ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ)

ಫೆ.23 ಮುಂಬೈ ಇಂಡಿಯನ್ಸ್​-ಡೆಲ್ಲಿ ಕ್ಯಾಪಿಟಲ್ಸ್​

ಫೆ.24 ಆರ್​ಸಿಬಿ-ಯುಪಿ ವಾರಿಯರ್ಸ್​

ಫೆ.25 ಗುಜರಾತ್​ ಜೈಂಟ್ಸ್​-ಮುಂಬೈ ಇಂಡಿಯನ್ಸ್​

ಫೆ.26 ಯುಪಿ ವಾರಿಯರ್ಸ್​-ಡೆಲ್ಲಿ ಕ್ಯಾಪಿಟಲ್ಸ್​

ಫೆ.27 ಆರ್​ಸಿಬಿ-ಗುಜರಾತ್​ ಜೈಂಟ್​

ಫೆ.28 ಮುಂಬೈ ಇಂಡಿಯನ್ಸ್​-ಯುಪಿ ವಾರಿಯರ್ಸ್​

ಫೆ.29 ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​

ಮಾ .1 ಯುಪಿ ವಾರಿಯರ್ಸ್​-ಗುಜರಾತ್​ ಜೈಂಟ್ಸ್​

ಮಾ.2 ಆರ್​ಸಿಬಿ-ಮುಂಬೈ ಇಂಡಿಯನ್ಸ್​

ಮಾ.3 ಗುಜರಾತ್​ ಜೈಂಟ್ಸ್​-ಡೆಲ್ಲಿ ಕ್ಯಾಪಿಟಲ್ಸ್​

ಮಾ.4 ಯುಪಿ ವಾರಿಯರ್ಸ್​-ಆರ್​ಸಿಬಿ

ದೆಹಲಿ ಚರಣ (ಸ್ಥಳ: ಅರುಣ್​ ಜೇಟ್ಲಿ ಕ್ರೀಡಾಂಗಣ)

ಮಾ.5 ಡೆಲ್ಲಿ ಕ್ಯಾಪಿಟಲ್ಸ್​&ಮುಂಬೈ ಇಂಡಿಯನ್ಸ್​

ಮಾ.6 ಗುಜರಾತ್​ ಜೈಂಟ್ಸ್​&ಆರ್​ಸಿಬಿ

ಮಾ.7 ಯುಪಿ ವಾರಿಯರ್ಸ್​&ಮುಂಬೈ ಇಂಡಿಯನ್ಸ್​

ಮಾ.8 ಡೆಲ್ಲಿ ಕ್ಯಾಪಿಟಲ್ಸ್​- ಯುಪಿ ವಾರಿಯರ್ಸ್​

ಮಾ.9 ಮುಂಬೈ ಇಂಡಿಯನ್ಸ್​-ಗುಜರಾತ್​ ಜೈಂಟ್ಸ್​

ಮಾ.10 ಡೆಲ್ಲಿ ಕ್ಯಾಪಿಟಲ್ಸ್-ಆರ್​ಸಿಬಿ

ಮಾ.11 ಗುಜರಾತ್​ ಜೈಂಟ್ಸ್​- ಯುಪಿ ವಾರಿಯರ್ಸ್​

ಮಾ.12 ಮುಂಬೈ ಇಂಡಿಯನ್ಸ್​-ಆರ್​ಸಿಬಿ

ಮಾ.13 ಡೆಲ್ಲಿ ಕ್ಯಾಪಿಟಲ್ಸ್​-ಗುಜರಾತ್​ ಜೈಂಟ್ಸ್​

ಮಾ.15 ಎಲಿಮಿನೇಟರ್​

ಮಾ.17 ಫೈನಲ್​

ಪಂದ್ಯಗಳು ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net