

ಸೆಂಚುರಿಯನ್: ಟೀಂ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ 2023 ವಿಶೇಷ ಎಂದೇ ಹೇಳಬಹುದಾಗಿದೆ. ಈಗಾಗಲೇ ಏಕದಿನ ವಿಶ್ವಕಪ್ ಸೇರಿದಂತೆ ಹಲವು ಪಂದ್ಯಗಳಲ್ಲಿ ದಾಖಲೆ ಬರೆದಿರುವ ಕಿಂಗ್ ಕೊಹ್ಲಿ ಈಗ ಮತ್ತೊಂದು ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಭಾರತ ತಂಡ ಇನ್ನಿಂಗ್ಸ್ ಹಾಗೂ 32 ರನ್‌ಗಳಿಂದ ಸೋಲುಂಡಿದೆ. ಸೋಲಿನ ನಡುವೆಯು ವಿರಾಟ್ ಕೊಹ್ಲಿ ಅವರ ಈ ವಿಶಿಷ್ಟ ಸಾಧನೆ ಟೀಂ ಇಂಡಿಯಾಗೆ ಟಾನಿಕ್ ಆಗಿ ಪರಿಣಮಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಮಾಲ್ ಮಾಡಿದ ಕಾಟೇರ; ಮೊದಲ ದಿನ ಗಳಿಸಿದ್ದೆಷ್ಟು?
ಡಿಸೆಂಬರ್ 26ರಂದು ಆರಂಭವಾದ ಎರಡು ಪಂದ್ಯಗಳ ಟೆಸ್ಸ್ ಸರಣಿಯಲ್ಲಿ ವಿರಾಟ್ ಕೊಹ್ಲಿ 66 ರನ್ಗಳನ್ನು ಬಾರಿಸಿದರೆ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಒಂದನ್ನು ಬರೆಯಲಿದ್ದಾರೆ ಎಂದು ಹೇಳಲಾಗಿತ್ತು. ವಿರಾಟ್ ಕೊಹ್ಲಿ ಎರಡು ಇನ್ನಿಂಗ್ಸ್ನಲ್ಲಿ ಒಟ್ಟಾರೆಯಾಗಿ 114 ರನ್ ಗಳಿಸಿದ್ದಾರೆ. ಈ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ಬಾರಿ 2 ಸಾವಿರ ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರ ವರ್ಷ ಒಂದರಲ್ಲಿ 6 ಬಾರಿ 2 ಸಾವಿರ ರನ್ ಕಲೆಹಾಕಿದ್ದರು. ಇತ್ತ ವಿರಾಟ್ ಕೊಹ್ಲಿ 7 ಬಾರಿ ಈ ಸಾಧನೆ ಮಾಡಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮಲಿಗಲ್ಲನ್ನು ಸಾಧಿಸಿದ್ದಾರೆ. ವಿರಾಟ್ 2012 (2,186), 2014 (2,286), 2016 (2,595), 2017 (2,818), 2018 (2,735), 2019 (2,455), 2023 (2,048) 7 ಬಾರಿ ಈ ಸಾಧನೆ ಮಾಡಿದ್ದಾರೆ.