ಇಂದು ಗ್ವಾಲಿಯರ್​ನಲ್ಲಿ ಮೊದಲ ಟಿ20; ಯುವ ಭಾರತಕ್ಕೆ ಬಾಂಗ್ಲಾದೇಶ ಸವಾಲು

web ind vs ban
Published on

ಗ್ವಾಲಿಯರ್​: ಪ್ರಮುಖ ತಾರೆಯರ ಗೈರಿನಲ್ಲಿ ಬಹುತೇಕ ಯುವ ಆಟಗಾರರಿಂದಲೇ ತುಂಬಿರುವ ಭಾರತ ತಂಡ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಸವಾಲಿಗೆ ಸಜ್ಜಾಗಿದ್ದು, ನೂತನ ಶ್ರೀಮಂತ್​ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ಮೊದಲ ಕಾದಾಟ ನಡೆಯಲಿದೆ. ವೇಗದ ಬೌಲಿಂಗ್​ ಸೆನ್ಸೇಶನ್​ ಮಯಾಂಕ್​ ಯಾದವ್​ ಪದಾರ್ಪಣೆ ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿದೆ.

ಈ ಸರಣಿ ಮುಗಿದ ಮೂರೇ ದಿನಗಳಲ್ಲಿ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​ ಸರಣಿ ನಡೆಯಲಿರುವುದರಿಂದ ಶುಭಮಾನ್​ ಗಿಲ್​, ರಿಷಭ್​ ಪಂತ್​, ಯಶಸ್ವಿ ಜೈಸ್ವಾಲ್​, ಮೊಹಮದ್​ ಸಿರಾಜ್​, ಅಕ್ಷರ್​ ಪಟೇಲ್​ರಂಥ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ನಾಯಕ ಸೂರ್ಯಕುಮಾರ್​ ಜತೆಗೆ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮಾತ್ರ ತಂಡದಲ್ಲಿರುವ ಇಬ್ಬರು ಪ್ರಮುಖ ಆಟಗಾರರಾಗಿದ್ದಾರೆ. ಇವರೊಂದಿಗೆ ಟಿ20 ವಿಶ್ವಕಪ್​ ವಿಜೇತ ತಂಡದ ಸದಸ್ಯರಾದ ಅರ್ಷದೀಪ್​ ಸಿಂಗ್​, ಸಂಜು ಸ್ಯಾಮ್ಸನ್​ ಕೂಡ ಇದ್ದಾರೆ. ಆಲ್ರೌಂಡರ್​ ಶಿವಂ ದುಬೆ ಬೆನ್ನುನೋವಿನಿಂದಾಗಿ ಸರಣಿಯಿಂದ ಹೊರಬಿದ್ದಿದ್ದು, ತಿಲಕ್​ ವರ್ಮ ಬದಲಿಗರಾಗಿ ಸೇರ್ಪಡೆಯಾಗಿದ್ದಾರೆ.

ಕಳೆದ ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್​ ಇಂಡಿಯಾ ಪರ ಪದಾರ್ಪಣೆ ಮಾಡಿ ಗಮನಸೆಳೆದ ಎಡಗೈ ಆರಂಭಿಕ ಅಭಿಷೇಕ್​ ಶರ್ಮ ಈ ಸರಣಿಯಲ್ಲಿ ಇನ್ನೊಂದು ಅವಕಾಶ ಪಡೆಯಲಿದ್ದಾರೆ. ಜತೆಗೆ ರಿಯಾನ್​ ಪರಾಗ್​, ರಿಂಕು ಸಿಂಗ್​ಗೂ ಸ್ಥಾನ ಭದ್ರಪಡಿಸಿಕೊಳ್ಳಲು ಅವಕಾಶವಿದೆ. 2021ರ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿ ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾಗಿದ್ದ ತಮಿಳುನಾಡಿನ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿಗೂ ಈ ಸರಣಿಯಲ್ಲಿ ಇನ್ನೊಂದು ಅವಕಾಶ ಲಭಿಸಲಿದೆ.

ಭಾರತ ತಂಡ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ 4 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಆ ಸಮಯದಲ್ಲೂ ಪ್ರಮುಖ ಆಟಗಾರರು ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​&ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯತ್ತ ಗಮನಹರಿಸಲಿದ್ದಾರೆ. ಹೀಗಾಗಿ ಆ ಟಿ20 ಸರಣಿಗೆ ಇದು ಆಯ್ಕೆ ಟ್ರಯಲ್ಸ್​ ಕೂಡ ಆಗಿರಲಿದೆ. ಜತೆಗೆ ಮುಂಬರುವ ಐಪಿಎಲ್​ ಆಟಗಾರರ ಹರಾಜಿನ ದೃಷ್ಟಿಯಿಂದಲೂ ಯುವ ಆಟಗಾರರಿಗೆ ಫ್ರಾಂಚೈಸಿಗಳ ಗಮನಸೆಳೆಯಲು ಇದೊಂದು ಉತ್ತಮ ವೇದಿಕೆಯಾಗಿದೆ.

ಟೀಮ್​ ನ್ಯೂಸ್​:

ಭಾರತ: ಪ್ರಮುಖ ಆಟಗಾರರ ಗೈರಿನಲ್ಲಿ ಐಪಿಎಲ್​ನಲ್ಲಿ ಮಿಂಚಿರುವ ಯುವ ಆಟಗಾರರೇ ಸಂಪೂರ್ಣವಾಗಿ ಬ್ಯಾಟಿಂಗ್​&ಬೌಲಿಂಗ್​ ವಿಭಾಗಕ್ಕೆ ಬಲ ತುಂಬಬೇಕಿದೆ. ಅನುಭವಿ ಸಂಜು ಸ್ಯಾಮ್ಸನ್​ ಈ ಬಾರಿ ವಿಕೆಟ್​ ಕೀಪಿಂಗ್​ ಜತೆಗೆ ಆರಂಭಿಕರಾಗಿಯೂ ಆಡಲಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ 2ನೇ ಸ್ಪಿನ್ನರ್​ ಸ್ಥಾನಕ್ಕೆ ರವಿ ಬಿಷ್ಣೋಯಿ-ವರುಣ್​ ಚಕ್ರವರ್ತಿ ಇದೆ. ಮಯಾಂಕ್​ ಯಾದವ್​ ಜತೆಗೆ ನಿತೀಶ್​ ಕುಮಾರ್​ ರೆಡ್ಡಿ ಮತ್ತು ಹರ್ಷಿತ್​ ರಾಣಾ ಪದಾರ್ಪಣೆಯ ನಿರೀೆ ಇದೆ.

ಸಂಭಾವ್ಯ ತಂಡ: ಅಭಿಷೇಕ್​ ಶರ್ಮ, ಸಂಜು ಸ್ಯಾಮ್ಸನ್​ (ವಿ.ಕೀ), ಸೂರ್ಯಕುಮಾರ್​ (ನಾಯಕ), ರಿಯಾನ್​ ಪರಾಗ್​, ನಿತೀಶ್​ ರೆಡ್ಡಿ/ತಿಲಕ್​ ವರ್ಮ, ಹಾರ್ದಿಕ್​ ಪಾಂಡ್ಯ, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ/ವರುಣ್​ ಚಕ್ರವರ್ತಿ, ಮಯಾಂಕ್​ ಯಾದವ್​, ಅರ್ಷದೀಪ್​/ಹರ್ಷಿತ್​ ರಾಣಾ.

ಬಾಂಗ್ಲಾದೇಶ: ಪ್ರವಾಸಿ ತಂಡವೂ ನಾಯಕ (ಶಾಂಟೊ), ವಿಕೆಟ್​ ಕೀಪರ್​ (ಲಿಟನ್​ದಾಸ್​) ಹೊರತುಪಡಿಸಿ ಟಿ20 ಸರಣಿಯಲ್ಲಿ ಬಹುತೇಕ ಟೆಸ್ಟ್​ಗಿಂತ ಭಿನ್ನವಾದ ತಂಡವನ್ನು ಕಣಕ್ಕಿಳಿಸುತ್ತಿದೆ. ಕಳೆದ ಟಿ20 ವಿಶ್ವಕಪ್​ ಬಳಿಕ ಆಲ್ರೌಂಡರ್​ ಶಕೀಬ್​ ಅಲ್​ ಹಸನ್​ ಚುಟುಕು ಮಾದರಿಯಿಂದ ನಿವೃತ್ತಿ ಹೊಂದಿರುವುದರಿಂದ ಅವರ ಉತ್ತರಾಧಿಕಾರಿಯನ್ನು ಆರಿಸಬೇಕಾದ ಸವಾಲು ಬಾಂಗ್ಲಾದ ಮುಂದಿದೆ. ಮೆಹಿದಿ ಹಸನ್​ ಮಿರಾಜ್​ ಈ ಸ್ಥಾನಕ್ಕೆ ಸದ್ಯದ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ.

ಸಂಭಾವ್ಯ ತಂಡ: ಲಿಟನ್​ ದಾಸ್​ (ವಿ.ಕೀ), ಪರ್ವೇಜ್​ ಹೊಸೈನ್​, ತಂಜಿದ್​ ಹಸನ್​, ನಜ್ಮಲ್​ ಹೊಸೈನ್​ ಶಾಂಟೊ (ನಾಯಕ), ಮೆಹಿದಿ ಹಸನ್​ ಮಿರಾಜ್​, ತೌಹಿದ್​ ಹೃದಯ್​, ಮಹಮುದುಲ್ಲಾ, ರಿಷದ್​ ಹೊಸೈನ್​, ತಂಜಿಮ್​ ಹಸನ್​ ಶಕಿಬ್​, ಟಸ್ಕಿನ್​ ಅಹ್ಮದ್​, ಮುಸ್ತಾಫಿಜುರ್​.

*ಆರಂಭ: ರಾತ್ರಿ 7.00

*ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

ಮುಖಾಮುಖಿ: 14

ಭಾರತ: 13

ಬಾಂಗ್ಲಾದೇಶ: 1

*ಮಯಾಂಕ್​ ಯಾದವ್​ ಪದಾರ್ಪಣೆ

ಕಳೆದ ಐಪಿಎಲ್​ನಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡದ ಪರ ಮಿಂಚಿನ ವೇಗದ ದಾಳಿಯೊಂದಿಗೆ ಎಲ್ಲರ ಗಮನಸೆಳೆದಿದ್ದ ದೆಹಲಿಯ ಯುವ ವೇಗಿ ಮಯಾಂಕ್​ ಯಾದವ್​ ಗ್ವಾಲಿಯರ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ನಿಶ್ಚಿತವೆನಿಸಿದೆ. ಫಿಟ್ನೆಸ್​ ಸಮಸ್ಯೆಯ ನಡುವೆ ಐಪಿಎಲ್​ನಲ್ಲಿ ಬ್ಯಾಟರ್​ಗಳನ್ನು ಉರಿದಾಳಿಯೊಂದಿಗೆ ಕಾಡಿದ್ದ 22 ವರ್ಷದ ಮಯಾಂಕ್​, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಅದೇ ರೀತಿ ಎದುರಾಳಿಗೆ ಬಿಸಿತುಪ್ಪವಾಗುವರೇ ಎಂಬ ಕುತೂಹಲವಿದೆ. ಪ್ರತಿ ಗಂಟೆಗೆ 150 ಕಿಲೋಮೀಟರ್​ಗಿಂತ ವೇಗದ ಎಸೆಯಬಲ್ಲ ಅವರ ಸಾಮರ್ಥ್ಯ ಭಾರತಕ್ಕೆ ಲಾಭದಾಯಕವೆನಿಸಿದೆ.

1: ಗ್ವಾಲಿಯರ್​ ಹೊರವಲಯದ ನೂತನ ಶ್ರೀಮಂತ್​ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ ಇದು ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೆನಿಸಿದೆ.

14: ಗ್ವಾಲಿಯರ್​ ನಗರ 14 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳುತ್ತಿದೆ. 2010ರಲ್ಲಿ ಕೊನೆಯದಾಗಿ ಇಲ್ಲಿನ ಕ್ಯಾಪ್ಟನ್​ ರೂಪ್​ ಸಿಂಗ್​ ಸ್ಟೇಡಿಯಂನಲ್ಲಿ ಏಕದಿನ ಪಂದ್ಯ ನಡೆದಾಗ ಸಚಿನ್​ ತೆಂಡುಲ್ಕರ್​ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು.

*644: ಭಾರತಕ್ಕೆ ಹೋಲಿಸಿದರೆ ಈ ಸರಣಿಯಲ್ಲಿ ಆಡುವ ಬಾಂಗ್ಲಾ ತಂಡ ಹೆಚ್ಚು ಅನುಭವಿ ಆಟಗಾರರಿಂದ ಕೂಡಿದೆ. ಬಾಂಗ್ಲಾದ ಆಟಗಾರರು ಒಟ್ಟು 644 ಟಿ20 ಪಂದ್ಯ ಆಡಿದ್ದರೆ, ಭಾರತದ ಆಟಗಾರು 389 ಪಂದ್ಯಗಳ ಅನುಭವವನ್ನಷ್ಟೇ ಹೊಂದಿದ್ದಾರೆ.

ರನ್​ಮಳೆ ನಿರೀಕ್ಷೆ

ಪಂದ್ಯಕ್ಕೆ ಮಳೆ ಭೀತಿ ಇದೆ. ಮಳೆ ಆಟಕ್ಕೆ ಅವಕಾಶ ಕಲ್ಪಿಸಿದರೆ ರನ್​ಮಳೆಯಾಗುವ ನಿರೀಕ್ಷೆಯೂ ಇದೆ. ಕಳೆದ ಒಂದು ವರ್ಷದಿಂದ ಇಲ್ಲಿ ನಡೆದ ದೇಶೀಯ ಟಿ20 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್​ನ ಸರಾಸರಿ ಮೊತ್ತ 190 ರನ್​. 8 ಪಂದ್ಯಗಳಲ್ಲಿ 4ರಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ 200 ಪ್ಲಸ್​ ಮೊತ್ತ ಪೇರಿಸಿದೆ.

ಬಾಂಗ್ಲಾಗೂ ಹೊಸ ಅಧ್ಯಾಯ

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ರವೀಂದ್ರ ಜಡೇಜಾ ಟಿ20 ನಿವೃತ್ತಿಯ ಬಳಿಕ ಭಾರತದ ಹೊಸ ಚುಟುಕು ಕ್ರಿಕೆಟ್​ ತಂಡ ಕಟ್ಟುವ ಪ್ರಕ್ರಿಯೆ ಈಗಾಗಲೆ ಆರಂಭಗೊಂಡಿದ್ದರೆ, ಪ್ರವಾಸಿ ಬಾಂಗ್ಲಾ ತಂಡಕ್ಕೂ ತನ್ನ ಪ್ರಮುಖ ಆಲ್ರೌಂಡರ್​ ಶಕೀಬ್​ ಅಲ್​ ಹಸನ್​ ಟಿ20 ನಿವೃತ್ತಿಯ ಬಳಿಕ ಹೊಸ ಅಧ್ಯಾಯ ಆರಂಭಿಸಲು ಈ ಸರಣಿ ಮೊದಲ ವೇದಿಕೆಯಾಗಿದೆ. ಶಕೀಬ್​ ಸ್ಥಾನ ತುಂಬಲು ಮೆಹಿದಿ ಹಸನ್​ ಮಿರಾಜ್​ 14 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ್ದಾರೆ. ವೇಗಿ ಮುಸ್ತಾಫಿಜುರ್​ ಬೌಲಿಂಗ್​ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net