

ಕೋಸ್ಟಾ ನವಾರಿನೊ (ಗ್ರೀಸ್): ಜಿಂಬಾಬ್ವೆಯ ಕ್ರಿಸ್ಟಿ ಕೋವೆಂಟ್ರಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ನೂತನ ಅಧ್ಯೆಯಾಗಿ ಆಯ್ಕೆಯಾಗಿದ್ದಾರೆ. 41 ವರ್ಷದ ಅವರು ಜಾಗತಿಕ ಒಲಿಂಪಿಕ್ಸ್ ಆಡಳಿತ ಸಂಸ್ಥೆಯ ಸಾರಥ್ಯ ವಹಿಸುತ್ತಿರುವ ಮೊದಲ ಮಹಿಳೆ ಮತ್ತು ಆಫ್ರಿಕಾದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈಜುಗಾರ್ತಿಯಾಗಿ ಎರಡು ಒಲಿಂಪಿಕ್ಸ್ಗಳಲ್ಲಿ ಸ್ಪರ್ಧಿಸಿ ತಲಾ ಒಂದು ಚಿನ್ನ, ಬೆಳ್ಳಿ, ಕಂಚಿನ ಪದಕ ಜಯಿಸಿರುವ ಕ್ರಿಸ್ಟಿ ಕೋವೆಂಟ್ರಿ ಜಿಂಬಾಬ್ವೆಯ ಹಾಲಿ ಕ್ರೀಡಾ ಸಚಿವೆಯೂ ಆಗಿದ್ದಾರೆ. ಅಧ್ಯಕ್ಷ ಹುದ್ದೆಗೆ ಒಟ್ಟು 7 ಅಭ್ಯರ್ಥಿಗಳು ಸ್ಪರ್ಧಿಸಿದ ಚುನಾವಣೆಯಲ್ಲಿ ಕ್ರಿಸ್ಟಿ ಕೋವೆಂಟ್ರಿ ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 100ಕ್ಕೂ ಅಧಿಕ ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಕ್ರಿಸ್ಟಿ ಕೋವೆಂಟ್ರಿ ಐಒಸಿಯ 10ನೇ ಮುಖ್ಯಸ್ಥರಾಗಿದ್ದು, ಥಾಮಸ್ ಬಾಷ್ರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಜರ್ಮನಿಯ ಥಾಮಸ್ ಬಾಷ್ 2013ರಿಂದ ಐಒಸಿ ಅಧ್ಯಕ್ಷರಾಗಿದ್ದರು. 2012ರಲ್ಲಿ ಅಥ್ಲೀಟ್ಸ್ ಕಮಿಷನ್ ಸದಸ್ಯೆಯಾಗಿ ಐಒಸಿ ಪ್ರವೇಶಿಸಿದ್ದ ಕ್ರಿಸ್ಟಿ, ಕಳೆದ 8 ವರ್ಷಗಳಿಂದ ಐಒಸಿ ಸದಸ್ಯೆಯಾಗಿದ್ದರು. 2023ರಲ್ಲಿ ಐಒಸಿ ಕಾರ್ಯಕಾರಿ ಸಮಿತಿ ಪ್ರವೇಶಿಸಿದ್ದರು.