

ಹೊಸದಿಲ್ಲಿ: ಇಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್, ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್, ಚೆಸ್ ಆಟಗಾರ ಪ್ರಗ್ನಾನಂದ ಅವರ ಹೆಸರನ್ನು ಉಲ್ಲೇಖಿಸಿದ್ದು, ಸಂಸತ್ತಿನ ಬಜೆಟ್ ಭಾಷಣದಲ್ಲಿ ವಿಶೇಷವಾಗಿ ಅಭಿನಂದನೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಸಂಸತ್ತಿನಲ್ಲಿ ನಡೆದ ಮಧ್ಯಂತರ ಬಜೆಟ್ ಭಾಷಣದಲ್ಲಿ ಚೆಸ್ ಆಟಗಾರ ಆರ್. ಪ್ರಗ್ನಾನಂದ ಹೆಸರು ಪ್ರಸ್ತಾಪಿಸಿದ ಸಚಿವರು, ಕಳೆದ ವರ್ಷ ನಡೆದ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಆಡಿದ ವೈಖರಿ ಹಾಗೂ ಕೊಟ್ಟ ಪೈಪೋಟಿಗೆ ಅವರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ.
ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, 2010ರಲ್ಲಿ ಭಾರತವು 80 ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊಂದಿತ್ತು. ಭಾರತವು ಕ್ರೀಡೆಯಲ್ಲಿ ಹೊಸ ಎತ್ತರಕ್ಕೆ ಏರುತ್ತಿದೆ ಮತ್ತು ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್‌ನಲ್ಲಿ ಅಥ್ಲೀಟ್‌ಗಳ ಅದ್ಭುತ ಪ್ರದರ್ಶನಗಳು ಕಂಡುಬಂದಿದೆ ಎಂದು ಹೇಳಿದರು.
"ದೇಶವು 2023ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅತ್ಯಧಿಕ ಪದಕಗಳನ್ನು ಗಳಿಸಿದೆ. ಇದೇ ವೇಳೆ ಪ್ರಗ್ನಾನಂದ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ನಡೆಸಿದ ತೀವ್ರ ಪೈಪೋಟಿಯನ್ನು ಕೂಡ ನಾವು ಗಮನಿಸಿದ್ದೇವೆ. 2010ರಲ್ಲಿ 20 ಕ್ಕಿಂತ ಕಡಿಮೆ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳಿಗೆ ಹೋಲಿಸಿದರೆ ಇಂದು ಭಾರತವು 80ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊಂದಿದೆ" ಎಂದು ಹೇಳಿದರು,(ಏಜೆನ್ಸೀಸ್).