ವಿಶ್ವ ವಿಜಯಕ್ಕೆ ಇಂದು ಭಾರತ-ಆಸೀಸ್​ ಸಮರ; 3ನೇ ಬಾರಿ ವಿಶ್ವಕಪ್​ ಒಲಿಸಿಕೊಳ್ಳುವ ತವಕದಲ್ಲಿ ಆತಿಥೇಯರು

ind vs aus web
Published on

ಅಹಮದಾಬಾದ್​: ಸತತ 10 ಜಯದೊಂದಿಗೆ ಅಜೇಯವಾಗಿ ಫೈನಲ್​ಗೇರಿರುವ ಆತಿಥೇಯ ಭಾರತ ತಂಡ ಮತ್ತು ಏಕದಿನ ವಿಶ್ವಕಪ್​ ಟ್ರೋಫಿ ಗೆಲುವಿನ ನಡುವೆ ಈಗ ಇರುವುದು ಆಸ್ಟ್ರೆಲಿಯಾ ತಂಡ ಮಾತ್ರ! ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಕಾಂಗರೂಗಳನ್ನು ಮತ್ತೊಮ್ಮೆ ಬೇಟೆಯಾಡುವ ಮೂಲಕ ಮೂರನೇ ಬಾರಿ ಮತ್ತು ತವರಿನಲ್ಲಿ ಎರಡನೇ ಬಾರಿ ಏಕದಿನ ವಿಶ್ವಕಪ್​ಗೆ ಮುತ್ತಿಡಲು ಟೀಮ್​ ಇಂಡಿಯಾ ಸಜ್ಜಾಗಿದೆ. 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಆಡಲಿರುವ ಭಾರತಕ್ಕೆ 10 ವರ್ಷಗಳ ಐಸಿಸಿ ಟ್ರೋಫಿ ಬರವನ್ನೂ ನೀಗಿಸುವ ಅವಕಾಶವಿದೆ. ಭಾರತದ ವಿಶ್ವಕಪ್​ ವಿಜೇತ ನಾಯಕರಾದ ಕಪಿಲ್​ ದೇವ್​, ಎಂಎಸ್​ ಧೋನಿ ಸಾಲಿಗೆ ಸೇರಲು ರೋಹಿತ್​ ಶರ್ಮ ಕೂಡ ತುದಿಗಾಲಲ್ಲಿ ನಿಂತಿದ್ದರೆ, ವಿರಾಟ್​ ಕೊಹ್ಲಿ ಮತ್ತು ಆರ್​. ಅಶ್ವಿನ್​ 2 ಬಾರಿ ಏಕದಿನ ವಿಶ್ವಕಪ್​ ಗೆದ್ದುಕೊಂಡ ಭಾರತದ ಮೊಟ್ಟಮೊದಲ ಸಾಧಕರೆನಿಸುವ ಅಪರೂಪದ ದಾಖಲೆಯ ಸನಿಹದಲ್ಲಿದ್ದಾರೆ.

ಲೀಗ್​ ಹಂತ ಮತ್ತು ಸೆಮಿೈನಲ್​ನಲ್ಲಿ ರೋಹಿತ್​ ಶರ್ಮ ಪಡೆ ತೋರಿರುವ ಬಲಿಷ್ಠ ನಿರ್ವಹಣೆಯನ್ನು ಗಮನಿಸಿದಾಗ ಚಾಂಪಿಯನ್​ ಪಟ್ಟಕ್ಕೇರಲು ಅತ್ಯಂತ ಅರ್ಹ ತಂಡವೆನಿಸಿದೆ. ಮೋದಿ ಸ್ಟೇಡಿಯಂನಲ್ಲಿ 1.30 ಲಕ್ಷ ಪ್ರೇಕ್ಷಕರ ಬಲವೂ ಆತಿಥೇಯರಿಗೆ ಇರಲಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಕಾಂಗರೂಗಳ ಪಡೆ ಯಾವಾಗಲೂ ಅಪಾಯಕಾರಿ ತಂಡ. ಹೀಗಾಗಿ ಫೈನಲ್​ ಮುಖಾಮುಖಿ ಅತ್ಯಂತ ಕುತೂಹಲಕ ಕೆರಳಿಸಿದೆ.

ಭಾರತವೇ ಫೇವರಿಟ್​

ಟೂರ್ನಿಯುದ್ದಕ್ಕೂ ರೋಹಿತ್​ ಶರ್ಮ ಪಡೆ ತೋರಿರುವ ಬಲಿಷ್ಠ ಆಟ ಗಮನಿಸಿದಾಗ ಫೈನಲ್​ನಲ್ಲೂ ಹಾಟ್​ ಫೇವರಿಟ್​ ಎನ್ನದಿರಲು ಕಾರಣವೇ ಇಲ್ಲ. ನಾಯಕ ರೋಹಿತ್​ ಶರ್ಮ ಸಿಕ್ಸರ್​ಗಳ ಆರ್ಭಟದೊಂದಿಗೆ ಭರ್ಜರಿ ಆರಂಭ ಒದಗಿಸುತ್ತಿದ್ದರೆ, ವಿರಾಟ್​ ಕೊಹ್ಲಿ ಟೂರ್ನಿಯಲ್ಲಿ 3 ಶತಕ ಸಿಡಿಸಿ ಟೂರ್ನಿಯಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ ಮತ್ತು ಗರಿಷ್ಠ ರನ್​ ಸ್ಕೋರರ್​ ಎನಿಸಿದ್ದಾರೆ. ಬೌಲಿಂಗ್​ನಲ್ಲಿ ಮೊಹಮದ್​ ಶಮಿ ವಿಕೆಟ್​ ಬೇಟೆ ಎದುರಾಳಿಗೆ ಚಳಿ ಹುಟ್ಟಿಸಿದೆ. ಹೀಗಾಗಿ ಎಲ್ಲ ವಿಧದಲ್ಲೂ ಪ್ರಾಬಲ್ಯ ಸಾಧಿಸಿರುವ ಭಾರತ "ಚಾಂಪಿಯನ್​' ಕಿರೀಟ ತೊಡುವ ಔಪಚಾರಿಕತೆ ಪೂರೈಸುವುದಷ್ಟೇ ಬಾಕಿ ಇದ್ದಂತಿದೆ.

ಪುಟಿದೆದ್ದಿದೆ ಆಸ್ಟ್ರೆಲಿಯಾ

ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧವೇ ಸೋತಿದ್ದ ಆಸೀಸ್​, ನಂತರ ಆಫ್ರಿಕಾ ವಿರುದ್ಧವೂ ಸೋತಿತ್ತು. ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ 7 ಜಯದೊಂದಿಗೆ ಸೆಮೀಸ್​ಗೇರಿದ್ದ ಆಸೀಸ್​, ಸೆಮೀಸ್​ನಲ್ಲಿ ಹರಿಣಗಳ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಇದೀಗ ಭಾರತ ವಿರುದ್ಧವೂ ಲೀಗ್​ ಹಂತದ ಸೋಲಿಗೆ ಸೇಡು ತೀರಿಸಿಕೊಂಡು 6ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲ ಪ್ಯಾಟ್​ ಕಮ್ಮಿನ್ಸ್​ ಬಳಗದ್ದಾಗಿದೆ. ಏಕೈಕ ಪ್ರಮುಖ ಸ್ಪಿನ್ನರ್​ (ಆಡಂ ಜಂಪಾ) ಇಟ್ಟುಕೊಂಡು ಭಾರತೀಯ ಪಿಚ್​ನಲ್ಲಿ ಯಶಸ್ಸು ಕಂಡಿರುವ ಆಸೀಸ್​, ಬ್ಯಾಟಿಂಗ್​ ವಿಭಾಗದಲ್ಲೂ ಅಸ್ಥಿರ ನಿರ್ವಹಣೆ ನಡುವೆ ಪುಟಿದೆದ್ದಿದೆ. ಹೀಗಾಗಿ ಗಾಯಗೊಂಡ ಹುಲಿಯಂತಿರುವ ಕಾಂಗರೂಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ.

ಏಕದಿನ ಮುಖಾಮುಖಿ: 150

ಭಾರತ: 57

ಆಸ್ಟ್ರೆಲಿಯಾ: 83

ರದ್ದು: 10

ವಿಶ್ವಕಪ್​ ಮುಖಾಮುಖಿ: 13

ಭಾರತ: 5

ಆಸ್ಟ್ರೆಲಿಯಾ: 8

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ.

ಟೀಮ್​ ನ್ಯೂಸ್​:

ಭಾರತ: ಸೆಮೀಸ್​ನಲ್ಲಿ ಸ್ನಾಯುಸೆಳೆತದ ಸಮಸ್ಯೆ ಎದುರಿಸಿದ್ದ ಆರಂಭಿಕ ಶುಭಮಾನ್​ ಗಿಲ್​ ಸಂಪೂರ್ಣ ಫಿಟ್​ ಆಗಿದ್ದು, ಭಾರತ ತಂಡದಲ್ಲಿ ಬದಲಾವಣೆ ಅಗತ್ಯವಿಲ್ಲವೆನಿಸಿದೆ. ಆದರೆ, ಟೂರ್ನಿಯ ಆರಂಭಿಕ ಪಂದ್ಯದಂತೆ ಮತ್ತೊಮ್ಮೆ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ರನ್ನು ಕಣಕ್ಕಿಳಿಸುವ ಚಿಂತನೆ ಇದ್ದರೂ, ಅವರಿಗಾಗಿ ಯಾರನ್ನು ಹೊರಗಿಡುವುದು ಇನ್ನಷ್ಟು ಗೊಂದಲ ಮೂಡಿಸುತ್ತದೆ. ಹೀಗಾಗಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಂತೆ ಭಾರತ ಈ ಸಲವೂ ಅಶ್ವಿನ್​ರನ್ನು ಹೊರಗಿಟ್ಟು ರಿಸ್ಕ್​ ತೆಗೆದುಕೊಳ್ಳಬೇಕಾಗುತ್ತದೆ.

ಆಸ್ಟ್ರೆಲಿಯಾ: ಆಲ್ರೌಂಡರ್​ಗಳಾದ ಮಾರ್ಕಸ್​ ಸ್ಟೋಯಿನಿಸ್​ ಮತ್ತು ಕ್ಯಾಮರಾನ್​ ಗ್ರೀನ್​ ವೈಫಲ್ಯ ವಿಶ್ವಕಪ್​ನಲ್ಲಿ ಆಸೀಸ್​ಗೆ ದೊಡ್ಡ ಹಿನ್ನಡೆಯಾಗಿದೆ. ಫೈನಲ್​ನಲ್ಲೂ ಅವರಿಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಮಾರ್ನಸ್​ ಲಬುಶೇನ್​ ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ಸೆಮಿಫೈನಲ್​ ಪಂದ್ಯದ ಗೆಲುವಿನ ಕಾಂಬಿನೇಷನ್​ ಬದಲಾಯಿಸಲು ಆಸೀಸ್​ ಮಾಡಿದಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net