ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿರುವ ವೇಗಿ ಜೇಮ್ಸ್​​ ಆಂಡರ್​ಸನ್ ಮೊದಲ ಬಾರಿ ಐಪಿಎಲ್​ ಹರಾಜಿಗೆ ಎಂಟ್ರಿ!

web anderson
Published on

ನವದೆಹಲಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಸರ್ವಾಧಿಕ 704 ವಿಕೆಟ್​ ಕಬಳಿಸಿರುವ ವೇಗಿ ಎನಿಸಿರುವ ಇಂಗ್ಲೆಂಡ್​ನ ಜೇಮ್ಸ್​ ಆಂಡರ್​ಸನ್​ ತನ್ನ 42ನೇ ವಯಸ್ಸಿನಲ್ಲಿ ವಿಶ್ವದ ಶ್ರೀಮಂತ ಟಿ20 ಟೂರ್ನಿ ಎನಿಸಿರುವ ಐಪಿಎಲ್​ನಲ್ಲಿ ಮೊದಲ ಬಾರಿ ಆಡುವ ಆಸಕ್ತಿ ತೋರಿಸಿದ್ದಾರೆ. ನವೆಂಬರ್​ 24&25ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿರುವ ಐಪಿಎಲ್​ ಆಟಗಾರರ ಮೆಗಾ ಹರಾಜಿಗೆ ಈಗಾಗಲೆ ಹೆಸರು ನೋಂದಾಯಿಸುವ 1,574 ಆಟಗಾರರಲ್ಲಿ ಆಂಡರ್​ಸನ್​ ಕೂಡ ಒಬ್ಬರಾಗಿದ್ದಾರೆ. ಆದರೆ ಇಂಗ್ಲೆಂಡ್​ ಟೆಸ್ಟ್​ ತಂಡದ ನಾಯಕ ಹಾಗೂ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಐಪಿಎಲ್​ ಹರಾಜಿನಿಂದ ದೂರ ಉಳಿದಿದ್ದಾರೆ.

ಕಳೆದ ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಆಂಡರ್​ಸನ್​, ಕೇವಲ 19 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು, ಹಿಂದೆಂದೂ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡಿರಲಿಲ್ಲ. 2014ರಲ್ಲಿ ಕೊನೆಯದಾಗಿ ಯಾವುದೇ ಪ್ರಕಾರದ ಟಿ20 ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದಾರೆ. ಇದರ ಹೊರತಾಗಿಯೂ ಅವರು ಮುಂಬರುವ ಐಪಿಎಲ್​ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಪ್ರಸಕ್ತ ಇಂಗ್ಲೆಂಡ್​ ತಂಡದ ಬೌಲಿಂಗ್​ ಕೋಚ್​ ಕೂಡ ಆಗಿರುವ ಆಂಡರ್​ಸನ್​ ಐಪಿಎಲ್​ ಹರಾಜಿಗೆ 1.25 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಆಂಡರ್​ಸನ್​ ಇದುವರೆಗೆ ವಿಶ್ವದ ಯಾವ ಟಿ20 ಫ್ರಾಂಚೈಸಿ ಲೀಗ್​ನಲ್ಲೂ ಆಡಿಲ್ಲ.

ಐಪಿಎಲ್​ ಹರಾಜಿಗೆ 1,500ಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರೂ, ಇವರೆಲ್ಲರೂ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎಲ್ಲ 10 ಫ್ರಾಂಚೈಸಿಗಳು ಬಿಡ್​ ಮಾಡಲು ಆಸಕ್ತಿ ಇರುವ ಆಟಗಾರರ ಪಟ್ಟಿಯನ್ನು ಸಲ್ಲಿಸಿದ ಬಳಿಕ ಬಿಸಿಸಿಐ, ಹರಾಜಿನಲ್ಲಿ ಪಾಲ್ಗೊಳ್ಳುವ ಅಂತಿಮ ಪಟ್ಟಿಯಲ್ಲಿ ಬಿಡುಗಡೆಗೊಳಿಸಲಿದೆ. ಆಂಡರ್​ಸನ್​ ಆ ಪಟ್ಟಿಯಲ್ಲೂ ಉಳಿದುಕೊಳ್ಳುವರೇ ಎಂಬ ಕುತೂಹಲವಿದೆ.

ಬೆನ್​ ಸ್ಟೋಕ್ಸ್​ ಗೈರು

2023ರ ಐಪಿಎಲ್​ನಲ್ಲಿ ಕೊನೆಯದಾಗಿ ಚೆನ್ನೈ ಸೂಪರ್​ಕಿಂಗ್ಸ್​ ಪರ ಆಡಿರುವ ಬೆನ್​ ಸ್ಟೋಕ್ಸ್​, ಗಾಯದಿಂದಾಗಿ 2024ರ ಆವೃತ್ತಿಯಿಂದ ಹೊರಗುಳಿದಿದ್ದರು. 33 ವರ್ಷದ ಸ್ಟೋಕ್ಸ್​ ಹಾಲಿ ವರ್ಷದ ಟಿ20 ವಿಶ್ವಕಪ್​ನಲ್ಲೂ ಆಡಿರಲಿಲ್ಲ. ಇದೀಗ ಐಪಿಎಲ್​ ಮೆಗಾ ಹರಾಜಿನಿಂದಲೂ ಹೊರಗುಳಿದಿದ್ದಾರೆ. ಇದರಿಂದ ಅವರು, ಮುಂದಿನ 2 ಮಿನಿ ಹರಾಜಿನಿಂದಲೂ ಹೊರಗುಳಿಯಬೇಕಾಗಿದೆ. ಯಾಕೆಂದರೆ ಹೊಸ ನಿಯಮಾವಳಿ ಪ್ರಕಾರ, ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳುವ ವಿದೇಶಿ ಆಟಗಾರರು ಮಾತ್ರ ಮಿನಿ ಹರಾಜಿನಲ್ಲೂ ಪಾಲ್ಗೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net