

ಬೆಂಗಳೂರು: 18ಣೇ ಆವೃತ್ತಿಯ ಐಪಿಎಲ್ಗೆ ಸಂಬಂಧಿಸಿದಂತೆ ಈಗಾಗಲೇ ಕೆಲಸಗಳು ಆರಂಭಗೊಂಡಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ರಿಟೇನ್ ಪಟ್ಟಿಯನ್ನು ತಂಡಗಳು (ಅಕ್ಟೋಬರ್ 31) ಇಂಡು ಬಿಡುಗಡೆ ಮಾಡಿವೆ. ರಿಟೇನ್ಗೆ ಸಂಬಂಧಿಸಿದಂತೆ ಆರ್ಸಿಬಿ (RCB) ಫ್ರಾಂಚೈಸಿ ಸಖತ್ ಸೌಂಡ್ ಮಾಡಿತ್ತು. ಇದೀಗ ಆರ್ಸಿಬಿ ತನ್ನ ರಿಟೇನ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಂಡದಲ್ಲಿ ಮೂವರು ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಆರ್ಸಿಬಿ ಫ್ರಾಂಚೈಸಿಯೂ ತನ್ನ ಮೊದಲ ಆಯ್ಕೆಯಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದು, ಎರಡನೇ ಆಯ್ಕೆಯಾಗಿ ರಜತ್ ಪಾಟಿದಾರ್ಗೆ ಮಣೆ ಹಾಕಲಾಗಿದೆ. ಮೂರನೇ ಆಯ್ಕೆಯಾಗಿ ತಂಡ ವೇಗಿ ಯಶ್ ದಯಾಳ್ ಅವರನ್ನು ಆಯ್ಕೆ ಮಾಡಿದ್ದು, ಇವರಿಗೆ ಕ್ರಮವಾಗಿ 21, 11 ಹಾಗೂ 5 ಕೋಟಿ ರೂ. ಹಣವನ್ನು ಫ್ರಾಂಚೈಸಿ ವ್ಯಯಿಸಲಿದೆ.
ಸದ್ಯ ಮೂವರು ಆಟಗಾರರನ್ನು ರಿಟೇನ್ ಮಾಡುವ ಮೂಲಕ ಆರ್ಸಿಬಿ ಫ್ರಾಂಚೈಸಿ ಎಲ್ಲರ ಗಮನ ಸೆಳೆದಿದ್ದು, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್ ಹಾಗೂ ಫಾಫ್ ಡು ಪ್ಲೆಸಿಸ್ ಅವರನ್ನು ಆರ್ಟಿಎಮ್ ಬಳಸಿ ಖರೀದಿಸುವ ಸಾಧ್ಯತೆ ಹೆಚ್ಚಿದ್ದು, ಈ ಮೂವರು ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಅಚ್ಚರಿಯ ನಿರ್ಧಾರದಲ್ಲಿ ಫ್ರಾಂಚೈಸಿ ಮೊಹಮ್ಮದ್ ಸಿರಾಜ್ರನ್ನು ರಿಟೇನ್ ಮಾಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ಪೊಲೀಸರನ್ನು ಖರೀದಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಫ್ರಾಂಚೈಸಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣ ಸರ್ಕಾರ ಡಿವೈಎಸ್ಪಿಯಾಗಿ ನೇಮಿಸಿದ್ದು, ಅನೇಕರಿಗೆ ಕ್ರಿಕೆಟ್ ಆಡಲು ಸ್ಫೂರ್ತಿಯಾಗಿದ್ದಾರೆ. ಅಂತಿಮವಾಗಿ ಆರ್ಸಿಬಿ ಆರ್ಟಿಎಮ್ ಕಾರ್ಡ್ಅನ್ನು ಯಾರ ಮೇಲೆ ಬಳಸಲಿದೆ ಎಂದು ವರ್ಷಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ತಿಳಿಯಲಿದೆ.