

ನವದೆಹಲಿ: ಇತ್ತೀಚೆಗಷ್ಟೇ ನಡೆದ ಟೀಮ್ ಇಂಡಿಯಾ (Team India) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು 7 ವಿಕೆಟ್ಗಳ ಅಂತರದಿಂದ ಮಣಿಸಿದ್ದ ಭಾರತ ತಂಡ ಇಂದು ನಡೆದ ಎರಡನೇ ಟಿ20 ಮ್ಯಾಚ್ನಲ್ಲಿಯೂ ಅದ್ಭುತ ಪ್ರದರ್ಶನದ ಮೂಲಕ ಬಾಂಗ್ಲಾ ಪಡೆಯನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. ಮೊದಲ ಸೋಲಿನಿಂದಲೇ ಭಾರೀ ಮುಖಭಂಗ ಅನುಭವಿಸಿದ್ದ ಬಾಂಗ್ಲಾಗೆ ಈ ಸೋಲು ಮರೆಯದ ಕ್ಷಣವಾಗಿ ಮಾರ್ಪಟ್ಟಿದೆ. ಆದ್ರೆ, ಭಾರತಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ಹಿಡಿದ ಕ್ಯಾಚ್ ಸಖತ್ ಖುಷಿ ಕೊಟ್ಟಿದೆ.
ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ, 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ಪಡೆಯ ಬ್ಯಾಟರ್ಗಳು, ಅಂತಿಮವಾಗಿ ಗೆಲುವಿನ ದಡ ಸೇರುವಲ್ಲಿ ವಿಫಲರಾದರು. ಭಾರತದ ಬೌಲರ್ಗಳಿಗೆ ಬೆದರಿದ ಬಂಗ್ಲಾದೇಶದ ಸ್ಟಾರ್ ಬ್ಯಾಟ್ಸ್ಮನ್ಗಳು, ಕೊಟ್ಟ ಗುರಿಯನ್ನು ತಲುಪಲು ತೀವ್ರ ಪರದಾಡಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಕಣ್ತುಂಬಿಕೊಂಡ ಫ್ಯಾನ್ಸ್, ಹಾರ್ದಿಕ್ ಪಾಂಡ್ಯ ಹಿಡಿದ ಆ ಒಂದು ಕ್ಯಾಚ್ಗೆ ಫಿದಾ ಆಗಿ, ಇದೀಗ ಹೊಸ ಹೆಸರನ್ನೇ ಇಟ್ಟಿದ್ದಾರೆ.
222 ರನ್ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾದೇಶ, ಬಹಳ ವೇಗವಾಗಿ ತಂಡದ 6 ಪ್ರಮುಖ ಬ್ಯಾಟರ್ಗಳ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನು ಈ ವೇಳೆ 13ನೇ ಓವರ್‌ನಲ್ಲಿ ಕ್ರೀಸ್ನಲ್ಲಿದ್ದ ಬ್ಯಾಟರ್ ರಿಶಾದ್ ಹೊಸೈನ್, ವರುಣ್ ಚಕ್ರವರ್ತಿ ಎಸೆತದಲ್ಲಿ ಲಾಂಗ್ ಆನ್ ಆಡಲು ಯತ್ನಿಸಿದರು. ಬಾಲ್ ಮೇಲೆ ಬೌಂಡರಿ ಲೈನ್ನತ್ತ ಹೋಗುತ್ತಿದ್ದಂತೆ ಓಡಿದ ಪಾಂಡ್ಯ, ಅದ್ಭುತ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು.
ರಿಶಾದ್ ಹೊಸೈನ್ ಕೊಟ್ಟ ಕ್ಯಾಚ್ ಹಿಡಿಯಲು ಒಂದೆಡೆ ಅಭಿಷೇಕ್ ಶರ್ಮ ಓಡಿ ಬಂದರೆ, ಮತ್ತೊಂದೆಡೆ ಹಾರ್ದಿಕ್ ಕೂಡ ಓಡಿ ಬಂದಿದ್ದಾರೆ. ಈ ಸಮಯದಲ್ಲಿ ಮೈದಾನದಲ್ಲಿದ್ದವರು ಇವರಿಬ್ಬರು ಮುಖಾಮುಖಿ ಡಿಕ್ಕಿಯಾಗಿ ಕ್ಯಾಚ್ ಕೈಚೆಲ್ಲಬಹುದು ಎಂದೇ ನಿರೀಕ್ಷಿಸಿದ್ದರು. ಆದ್ರೆ, ಮೊದಲು ಕೈಹಾಕಿ, ಯಶಸ್ವಿಯಾಗಿ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ, ಅಭಿಷೇಕ್ಗೆ ಡಿಕ್ಕಿ ಹೊಡೆಯದೆ ಈ ಸಾಹಸ ಮಾಡಿದರು. ಇದು ಅಭಿಮಾನಿಗಳು ಹಾಗೂ ತಂಡವರ ಮುಖದಲ್ಲಿ ಮಂದಹಾಸ ಮೂಡಿಸಿತು. ಸದ್ಯ ಕ್ಯಾಚ್ನ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).