

ನವದೆಹಲಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರು ಐಪಿಎಲ್ ಟೂರ್ನಿಗಾಗಿ ದುಬೈಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಜಮೈಕಾದಲ್ಲಿ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿ ಕರೊನಾ ಭೀತಿ ಎದುರಿಸಿದ್ದರು. ಆದರೆ ಬೋಲ್ಟ್ಗೆ ಪಾಸಿಟಿವ್ ಬಂದರೂ ಗೇಲ್ಗೆ ನೆಗೆಟಿವ್ ವರದಿ ಬಂದ ಕಾರಣ ದುಬೈಗೆ ಪ್ರಯಾಣ ಬೆಳೆಸಲು ಅವರಿಗೆ ಅನುಮತಿ ದೊರೆತಿತ್ತು. ಆದರೆ ದುಬೈಗೆ ಬಂದ ನಂತರವೂ ಗೇಲ್ ಕಿತಾಪತಿ ಮುಂದುವರಿದಿದ್ದು, ಜಾಹೀರಾತು ಚಿತ್ರೀಕರಣವೊಂದರಲ್ಲಿ ಭಾಗವಹಿಸಿ ಟೀಕೆ ಎದುರಿಸಿದ್ದಾರೆ.
ಇಬ್ಬರು ವಿದೇಶಿ ಮಹಿಳೆಯರ ನಡುವೆ ಕುಳಿತಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಗೇಲ್, 'ಕ್ರಿಸ್ ಗೇಲ್ ಅವರು ಇಲ್ಲೇನು ಮಾಡುತ್ತಿದ್ದಾರೆ? ನಾನು: ಅವರಿಗೆ ಏನು ಬೇಕೋ ಅದನ್ನು ಮಾಡುತ್ತಿರುವಂತಿದೆ! ಕಿಂಗ್ ಗೇಲ್ ??? ಯುನಿವರ್ಸ್ ಬಾಸ್, 40 ಶೇಡ್ಸ್ ಆಫ್ ಗೇಲ್ , ಮೈ ದುಬೈ' ಎಂದು ಬರೆದುಕೊಂಡಿದ್ದಾರೆ.
ಗೇಲ್ ಪೋಸ್ಟ್ನ ಬೆನ್ನಲ್ಲೇ ಅಭಿಮಾನಿಗಳು ಅವರು ಬಿಸಿಸಿಐನ ಕ್ವಾರಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಿಸಿಸಿಐ ಮಾರ್ಗಸೂಚಿಯ ಪ್ರಕಾರ ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿದ ಮೊದಲ 6 ದಿನಗಳ ಕಾಲ ಕ್ವಾರಂಟೈನ್ನಲ್ಲಿರುವುದು ಕಡ್ಡಾಯವಾಗಿದೆ. ಆದರೆ 40 ವರ್ಷದ ಗೇಲ್, ಕ್ವಾರಂಟೈನ್ಗೆ ಒಳಪಡದೆ ಶೂಟಿಂಗ್ನಲ್ಲಿ ಭಾಗವಹಿಸಿರುವುದು, ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಕರೊನಾ ಆಘಾತ ಎದುರಾಗಿರುವ ನಡುವೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತಂಡದ ಹೊಸ ಜೆರ್ಸಿ ಅನಾವರಣ
ಬೋಲ್ಟ್ ಪಾರ್ಟಿ ಮುಗಿಸಿ ಬಂದ ಬಳಿಕ ಕನಿಷ್ಠ ಕ್ವಾರಂಟೈನ್ ನಿಯಮಗಳನ್ನಾದರೂ ಗೇಲ್ ಪಾಲಿಸಬೇಕಾಗಿತ್ತು. ಆಟಗಾರನಾಗಿ ಜವಾಬ್ದಾರಿಯಿಂದ ಗೇಲ್ ವರ್ತಿಸುತ್ತಿಲ್ಲ. ಅವರ ಒಂದು ತಪ್ಪಿನಿಂದ ಎಲ್ಲರಿಗೂ ಸಂಕಷ್ಟ ಎದುರಾಗಬಹುದು ಎಂಬ ಟೀಕೆಗಳು ಕೇಳಿಬಂದಿವೆ. ಗೇಲ್ ಮುಂಬರುವ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಬೇಕಾಗಿದೆ.