

ನವದೆಹಲಿ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಸೋಲುಂಡಿದ್ದು, ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. 12 ವರ್ಷಗಳ ಬಳಿಕ ತವರು ನೆಲದಲ್ಲಿ ಸರಣಿ ಸೋಲುವ ಮೂಲಕ ಭಾರತ (Team India) ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡಿದ್ದು, ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮ ವಿರುದ್ಧ ಕ್ರೀಡಾಭಿಮಾನಿಗಳು ಕಿಡಿಕಾರಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ತವರು ನೆಲದಲ್ಲಿ ಸತತವಾಗಿ 18 ಸರಣಿಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಎದುರಾಳಿಗಳ ವಿರುದ್ಧ ತನ್ನ ಪಾರುಪತ್ಯವನ್ನು ಮೆರೆದಿತ್ತು. 2012-13ರಲ್ಲಿ ಇಂಗ್ಲೆಂಡ್ ವಿರುದ್ಧ ಕಡೆಯದಾಗಿ ಸೋಲನ್ನು ಅನುಭವಿಸಿದ್ದ ಭಾರತ (Team India) ತಂಡವು ಆ ಬಳಿಕ ಸತತವಾಗಿ ಗೆಲ್ಲುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿತ್ತು. ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್ (NewZealand) ಟೆಸ್ಟ್ ತಂಡದ ನೂತನ ನಾಯಲ ಟಾಮ್ ಲ್ಯಾಥಮ್ ಮುರಿದು ಹಾಕಿದ್ದು, ಭಾರತದ ನೆಲದಲ್ಲಿ ಬ್ಯಾಕ್-ಟು-ಬ್ಯಾಕ್ ಟೆಸ್ಟ್ಗಳನ್ನು ಗೆದ್ದ ಮೊದಲ ಪ್ರವಾಸಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು ಹಾಗೂ ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಪ್ರವಾಸಿ ತಂಡದ ಪ್ರದರ್ಶನವನ್ನು ಕ್ರೀಡಾಭಿಮಾನಿಗಳು ಹಾಡಿ ಹೊಗಳುತ್ತಿದ್ದು, ಟೀಮ್ ಇಂಡಿಯಾದ (Team India) ಪ್ರದರ್ಶನ ಕಂಡು ಕಿಡಿಕಾರುತ್ತಿದ್ದಾರೆ. ನಾವು ನೋಡಿರುವ ವರ್ಸ್ಟ್ ಕ್ಯಾಪ್ಟನ್ ಹಾಗೂ ಕೋಚ್ ಜೋಡಿ ಇದಾಗಿದೆ. ಗೌತಮ್ ಗಂಭೀರ್ ಅವರ ಕೋಚ್ ಅವಧಿಯ ಆರಂಭದಲ್ಲೇ ಈ ರೀತಿಯಾಗಿರುವುದು ಭವಿಷ್ಯದ ದೃಷ್ಠಿಯಿಂದ ಬಿಸಿಸಿಐ ಯೋಚಿಸುವುದು ಸೂಕ್ತವಾಗಿದೆ. ಕೂಡಲೇ ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ಎಂದು ಕ್ರೀಡಾಭಿಮಾನಿಗಳು ಕಮೆಂಟ್ ಹಾಕಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ (NewZealand) ತಂಡವು ವಾಷಿಂಗ್ಟನ್ ಸುಂದರ್. ಆರ್. ಅಶ್ವಿನ್ ಆಫ್ಸ್ಪಿನ್ ದಾಳಿಗೆ ನಲುಗಿ 259 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ (Team India) 156 ರನ್ಗಳಿಗೆ ಆಲೌಟ್ ಆಗಿತ್ತು. 103 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು ನಾಯಕ ಟಾಮ್ ಲಾಥಮ್ (86 ರನ್, 133 ಎಸೆತ, 10 ಬೌಂಡರಿ) ದಿಟ್ಟ ಬ್ಯಾಟಿಂಗ್ ಫಲವಾಗಿ 255 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 359 ರನ್ಗಳ ಗುರಿ ನೀಡಿತು.
ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಿವೀಸ್ ಬೌಲರ್ಗಳು (NewZealand) ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್ನಲ್ಲೂ ಬ್ಯಾಟ್ಸ್ಮನ್ಗಳು ಕೈಕೊಟ್ಟ ಪರಿಣಾಮ ಟೀಮ್ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು. ತಂಡದ ಪರ ರವೀಂದ್ ಜಡೇಜಾ 42 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್ನಲ್ಲೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ ಪ್ರಮುಖ 7 ವಿಕೆಟ್ ಉರುಳಿಸಿದ್ದ ಸ್ಯಾಂಟ್ನರ್, ಎರಡನೇ ಇನ್ನಿಂಗ್ಸ್ನಲ್ಲೂ 6 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕಿವೀಸ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.