

ಮುಂಬೈ: ರೈಲು ನಿಲ್ದಾಣದಲ್ಲಿ (Railway Station) ಕಾಲ್ತುಳಿತ (Stampede) ಉಂಟಾದ ಪರಿಣಾಮ 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ (Bandra) ನಡೆದಿದೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಶಬೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್ ಸುಖದರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮಸೇವಕ್ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್ರಾಮ್ ಕಂಗಯ್ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19), ಮತ್ತು ನೂರ್ ಮೊಹಮ್ಮದ್ ಶೇಖರ್ (18) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮುಂಬೈ ನಗರಪಾಲಿಕೆ ಅಧಿಕಾರಿಯೊಬ್ಬರು, ಬಾಂದ್ರಾ ರೈಲು ನಿಲ್ದಾಣದ (Bandra Railway Station) ಪ್ಲಾಟ್‌ಫಾರ್ಮ್ ಒಂದರಲ್ಲಿ ಈ ಘಟನೆ ನಡೆದಿದ್ದು, ಗೋರಖ್ಪುರ್ ಎಕ್ಸ್ಪ್ರೆಸ್ ಹತ್ತಲು ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ದೀಪಾವಳಿ ಆದ ಕಾರಣ ತಂತಮ್ಮ ಊರುಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ಸ್ಟೇಷನ್ನಲ್ಲಿ ಇದ್ದರು. ಟ್ರೈನ್ ಹತ್ತುವಾಗ ನೂಕುನುಗ್ಗುಲು ತೀವ್ರಗೊಂಡು ಕಾಲ್ತುಳಿತವಾಗಿದೆ. ಗಾಯಗೊಂಡವರ ಪೈಕಿ 7 ಮಂದಿಯ ಆರೋಗ್ಯ ಸ್ಥಿರವಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಂದ್ರಾದಿಂದ ಗೋರಖ್‌ಪುರಕ್ಕೆ ಹೋಗುವ ರೈಲು ಸಂಖ್ಯೆ 22921 ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಬಂದಿತ್ತು. ಗೋರಖ್‌ಪುರದ ಸಾಪ್ತಾಹಿಕ ರೈಲು ಭಾನುವಾರ ಬೆಳಿಗ್ಗೆ 5:10ಕ್ಕೆ ಹೊರಡಬೇಕಿತ್ತು. ಆದರೆ ರೈಲು 5:56ಕ್ಕೆ ನಿಲ್ದಾಣಕ್ಕೆ ಬಂದಿದೆ. ಮೊದಲೇ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿ ಈ ಘಟನೆ ನಡೆದಿದೆ.