

ಮುಂಬೈ: ನಿನ್ನೆ (ಏ.01) ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಎರಡು ಟೀಮ್ಗಳ ಮಧ್ಯೆ ಭರ್ಜರಿ ಪೈಪೋಟಿ ಕೂಡ ನಡೆಯಿತು. ಆದರೆ, ಅಂತಿಮವಾಗಿ ಮತ್ತೊಮ್ಮೆ ಗೆಲುವು ದಾಖಲಿಸುವಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ವಿಫಲವಾಯಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಆರ್ ಮುಂಬೈ ಬ್ಯಾಟ್ಸ್ಮನ್ಗಳನ್ನು ಅಬ್ಬರಿಸಲು ಬಿಡದೆ 20 ಓವರ್ಗಳಲ್ಲಿ ಕೇವಲ 124 ರನ್ ಕಲೆಹಾಕುವಂತೆ ಮಾಡಿತು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಸಂಜು ಸ್ಯಾಮ್ಸ್ಸನ್ ಪಡೆ ಬರೀ 15.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ತಲುಪುವ ಮೂಲಕ ಭರ್ಜರಿ ಗೆಲುವನ್ನು ದಾಖಲಿಸಿತು. ಇದು ಮತ್ತೊಮ್ಮೆ ಹಾರ್ದಿಕ್ ಕ್ಯಾಪ್ಟನ್ಸಿಗೆ ಕುತ್ತು ತಂದೊಡ್ಡಿತು.
ಐಪಿಎಲ್ ಆರಂಭಕ್ಕೂ ಮುನ್ನವೇ ಹಾರ್ದಿಕ್ ಪಾಂಡ್ಯ ವಿರುದ್ಧ ಛೀಮಾರಿ ಹಾಕುವುದು, ಅಸಡ್ಡೆಯಿಂದ ಮಾತನಾಡುವುದು ತಪ್ಪಿಲ್ಲ. ನಾಯಕತ್ವ ಬದಲಾವಣೆ ಆದಾಗಿನಿಂದ ಮುಂಬೈ ತಂಡದಲ್ಲಿ ಯಾವುದು ಸರಿಯಿಲ್ಲ. ರೋಹಿತ್ರಿಂದ ನಾಯಕತ್ವ ಕಸಿದ ಹಾರ್ದಿಕ್ ಪಾಂಡ್ಯಗೆ ಮುಂಬೈ ಅಭಿಮಾನಿಗಳಿಂದ ಸಿಗುತ್ತಿರುವುದು ಕೇವಲ ಅಸಮಾಧಾನದ ಮಾತು, ವ್ಯಂಗ್ಯ, ಲೇವಡಿ ಮಾತ್ರ. ಎಂಐ ಆಡುವ ಯಾವುದೇ ಸ್ಟೇಡಿಯಂ ಇರಲಿ, ಪಾಂಡ್ಯ ಕ್ರೀಡಾಂಗಣಕ್ಕೆ ಬಂದರೆ ಸಾಕು ಅಲ್ಲಿ ಸೇರಿರುವ ಕ್ರಿಕೆಟ್ ಫ್ಯಾನ್ಸ್ಗಳಿಂದ ಟೀಕಾ ಪ್ರಹಾರ ಪ್ರಾರಂಭವಾಗುತ್ತವೆ.
ಗುಜರಾತ್ ಟೈಟಾನ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ನಾಯಿ ನುಗ್ಗಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಅನೇಕರು ಹಾರ್ದಿಕ್ ಹೆಸರನ್ನು ಮುಂದಿಟ್ಟು, ಹಾರ್ದಿಕ್...ಹಾರ್ದಿಕ್ ಎಂದು ಕೂಗುವ ಮೂಲಕ ಅವಮಾನ ಮಾಡಿದ್ದರು. ಇದಲ್ಲದೆ, ಎಲ್ಇಡಿ ಪರದೆ ಮೇಲೆ ಹಾರ್ದಿಕ್ ಬಂದಾಗಲೆಲ್ಲ ಬೂ..... ಎಂದು ಕೂಗಿ ಅಪಹಾಸ್ಯ ಮಾಡುತ್ತಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ಸೇರಿದಂತೆ ನಿನ್ನೆಯ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿಯೂ ಇದು ಮರುಕಳಿಸಿತ್ತು.
ಆರ್ಆರ್ ಪಂದ್ಯದ ಟಾಸ್ ಸಮಯದಲ್ಲಿ ಹಾರ್ದಿಕ್ ಹೆಸರು ಹೇಳುತ್ತಿದ್ದಂತೆ ಬೂ...ಎಂದು ಕೂಗಿದರು. ಇದರಿಂದ ಬೇಸರಗೊಂಡ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಸರಿಯಾಗಿ ವರ್ತಿಸಿ ಎಂದು ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಇಷ್ಟಾದರೂ ಸಹ ಶಾಂತರಾಗದ ಜನರು, ಕೇವಲ ಸ್ಟೇಡಿಯಂ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕೂಡ ಹಾರ್ದಿಕ್ ನಾಯಕತ್ವದ ವಿರುದ್ಧ ವ್ಯಾಪಕ ಟೀಕೆ, ವ್ಯಂಗ್ಯವಾಡುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಹಲವರು ಹಾರ್ದಿಕ್ಗೆ ಕ್ಯಾಪ್ಟನ್ ಸ್ಥಾನ ಕೊಟ್ಟಿದ್ದು ಮ್ಯಾನೆಜ್ಮೆಂಟ್ ತಪ್ಪೋ? ಅಥವಾ ಸ್ಥಾನ ಪಡೆದಿದ್ದು ಹಾರ್ದಿಕ್ ಪಾಂಡ್ಯ ತಪ್ಪೋ? ಎಂದು ಪ್ರಶ್ನಿಸುತ್ತಿದ್ದಾರೆ.