

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಡುವಲ್ಲಿ ಯಶಸ್ವಿಯಾಯಿತು. ಇನ್ನು ಗುರುವಾರ (ಜು.4) ತಾಯ್ನಾಡಿಗೆ ಮರಳಿದ ಭಾರತೀಯ ಆಟಗಾರರಿಗೆ ಬಿಸಿಸಿಐ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿ, ಅದ್ಧೂರಿಯಾಗಿ ಸ್ವಾಗತಿಸಿತು. 125 ಕೋಟಿ ರೂ. ಹಣವನ್ನು ಬಹುಮಾನವಾಗಿ ಪಡೆದ ಟೀಮ್ ಇಂಡಿಯಾಗೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಚಾಂಪಿಯನ್ ಆಗಿ ಹೊರಬಂದ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ ಕೋರಿದ ಮುಂಬೈ ನಿವಾಸಿಗಳಿಗೆ ಧನ್ಯವಾದ ತಿಳಿಸಲು ಮುಂದಾದ ರೋಹಿತ್ ಪಡೆ, ಮಹಾನಗರಿಯ ರಸ್ತೆಯಲ್ಲಿ ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ಹೊರಟಿತು. ತಮ್ಮ ವಾಹನದ ಹಿಂದೆ-ಮುಂದೆ ಸುತ್ತುವರೆದಿದ್ದ ಪ್ರತಿಯೊಬ್ಬ ಅಭಿಮಾನಿಗೂ ಕೈಬೀಸಿ, ಥ್ಯಾಂಕ್ಯೂ ತಿಳಿಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಗೆ ಮರದ ಮೇಲಿನಿಂದ ಬಂದ ವ್ಯಕ್ತಿಯೊಬ್ಬ ಒಂದು ನಿಮಿಷ ಭಾರೀ ಅಚ್ಚರಿ ಉಂಟುಮಾಡಿದ್ದಾನೆ.
ತಮ್ಮ ನೆಚ್ಚಿನ ಕ್ರಿಕೆಟಿಗರ ಫೋಟೋ, ವಿಡಿಯೋ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ನೂಕುನುಗ್ಗಲು ಮಾಡುತ್ತಿದ್ದ ಅಭಿಮಾನಿಗಳ ಮಧ್ಯೆ ಓರ್ವ ವ್ಯಕ್ತಿ, ಎಲ್ಲರಿಗಿಂತ ತಾನು ಬುದ್ಧಿಶಾಲಿ ಎಂದು ತೋರಿಸಲು, ಟೀಮ್ ಇಂಡಿಯಾ ವಾಹನ ಸಮೀಪಿಸುತ್ತಿದ್ದಂತೆ ಮರವೇರಿ, ಅದರ ಕೊಂಬೆಯ ತುದಿಗೆ ಬಂದು ಫೋಟೋ ಕ್ಲಿಕ್ಕಿಸಿದ್ದಾನೆ. ರೋಹಿತ್, ವಿರಾಟ್ ನಿಂತಿದ್ದ ಪಕ್ಕದಲ್ಲೇ ಈತ ಕಾಣಿಸಿಕೊಂಡಿದ್ದು, ಇಡೀ ತಂಡ ಒಂದು ನಿಮಿಷ ಗಾಬರಿಯಾಗಿದೆ. ಕೂಡಲೇ ಮರದಿಂದ ಕೆಳಗೆ ಇಳಿಯುವಂತೆ ಕೊಹ್ಲಿ ಮನವಿ ಮಾಡಿದರೂ ಸಹ ಆತ ತನ್ನ ಹುಚ್ಚು ಅಭಿಮಾನವನ್ನು ಬಿಡಲಿಲ್ಲ.
ಮರದ ಮೇಲೆಯೇ ಕುಳಿತ ಅಭಿಮಾನಿ, ಟೀಮ್ ಇಂಡಿಯಾ ಅಲ್ಲಿಂದ ಹೋಗುವವರೆಗೂ ಅಲ್ಲಿಯೇ ಇದ್ದು, ಆನಂತರ ಕೆಳಗಿಳಿದಿದ್ದಾನೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.